'ಮೈಸೂರು ಜಿಲ್ಲೆ ವಿಭಜನೆ' ಹೇಳಿಕೆ: ಅನರ್ಹ ಶಾಸಕ ಎಚ್.ವಿಶ್ವನಾಥ್ ವಿರುದ್ಧ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

Update: 2019-10-15 18:27 GMT

ಮೈಸೂರು,ಅ.15: ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಪ್ರಸ್ತಾವನೆ ಮಾಡಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್ ನಡೆಯನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಆರು ತಾಲೂಕುಗಳಿವೆ. ಹೀಗಿರುವಾಗ 30-35 ಕಿ.ಮೀಗೊಂದು ಜಿಲ್ಲೆ ಮಾಡಲು ಸಾಧ್ಯವೇ ? ಹೀಗೆ 3 ತಾಲೂಕುಗಳಿಗೆ ಒಂದು ಜಿಲ್ಲೆ ಮಾಡುತ್ತಾ ಹೋದರೆ ರಾಜ್ಯದಲ್ಲಿ ಇನ್ನೂ 20-25 ಹೊಸ ಜಿಲ್ಲೆಗಳನ್ನು ಮಾಡಿ ಎಲ್ಲಾ ಅತೃಪ್ತ ಶಾಸಕರುಗಳನ್ನು ಉಸ್ತುವಾರಿಗಳನ್ನಾಗಿ ಮಾಡಿ ಬಿಡಬಹುದು. ರಾಜಕೀಯ ಗಿಮಿಕ್ ಗಾಗಿ ವಿಶ್ವನಾಥ್ ಅವರು ಮೊದಲಿನಿಂದಲೂ ಪ್ರಚಾರಕ್ಕಾಗಿ ಮನಸ್ಸಿಗೆ ಬಂದಂತೆ ಬಹಳಷ್ಟು ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿ ಈಗಾಗಲೇ ಜನತೆಯಿಂದ ಮುಜುಗರಕ್ಕೆ ಒಳಗಾಗಿದ್ದಾರೆ. ಈಗ ಅವರು ಮಾನಸಿಕ ಸ್ಥೀಮಿತ ಕಳೆದುಕೊಂಡು ಅಧಿಕಾರಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದರು. 

ಇತಿಹಾಸವಿರುವ ಜಿಲ್ಲೆಯನ್ನು ರಾಜಕೀಯ ಲಾಭಕ್ಕಾಗಿ ವಿಭಜಿಸಲು ಹೊರಟಿರುವ ವಿಶ್ವನಾಥ್ ಅವರ ನಡೆ ಅತ್ಯಂತ ನಾಚಿಕೆಗೇಡು ಎಂದರು. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆಯ ಜಿಲ್ಲಾದ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರಾಧ್ಯಕ್ಷ ಪ್ರಜೀಶ್, ಶಾಂತಮೂರ್ತಿ ಆರ್, ಡಾ.ಶಾಂತರಾಜೇ ಅರಸ್, ಪ್ರಭುಶಂಕರ್, ಮಿನಿ ಬಂಗಾರಪ್ಪ, ದೂರು ಸುರೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News