ಮಡಿಕೇರಿ: ಜೀವಂತವಿದ್ದವರ ಮರಣ ದೃಢೀಕರಣ ಪತ್ರ ಸೃಷ್ಟಿ ಆರೋಪ- ಗ್ರಾಮ ಲೆಕ್ಕಿಗನ ಅಮಾನತು

Update: 2019-10-16 12:59 GMT

ಮಡಿಕೇರಿ, ಅ.16 : ಜೀವಂತವಾಗಿದ್ದ ನಾಲ್ವರ ಮರಣ ದೃಢೀಕರಣ ಪತ್ರವನ್ನು ನಕಲಿಯಾಗಿ ಸೃಷ್ಟಿಸಿದ್ದಲ್ಲದೆ, ಗ್ರಾಮಲೆಕ್ಕಿಗರ ಮತ್ತು ತಹಶೀಲ್ದಾರರ ನಕಲಿ ಸಹಿ ಮಾಡಿದ ಆರೋಪ ಹೊತ್ತಿದ್ದ ಶಾಂತಳ್ಳಿ ಹೋಬಳಿಯ ಗ್ರಾಮಲೆಕ್ಕಿಗ ನಾಗೇಂದ್ರ ಅವರನ್ನು ಅಮಾನತುಗೊಳಿಸಿ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಶಾಂತಳ್ಳಿ ಗ್ರಾಮ ಲೆಕ್ಕಿಗ ಪಿ.ಎಸ್.ನಾಗೇಂದ್ರ ಅವರೇ ಅಮಾನತು ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಚಿಕ್ಕತೋಳೂರು ಗ್ರಾಮದ ಸಿ.ಪಿ.ಕುಶಾಲಪ್ಪ ಹಾಗೂ ಅವರ ತಾಯಿ ಕೆ.ಪಿ.ಜಾನಕಮ್ಮ ಹಾಗೂ ತಮ್ಮಂದಿರಾದ ಕೆ.ಪಿ.ಆನಂದ ಮತ್ತು ಕೆ.ಪಿ.ಗಣಪತಿ ಅವರು ಜೀವಂತವಾಗಿದ್ದರೂ, ಶಾಂತಳ್ಳಿ ಹೋಬಳಿಯ ಗ್ರಾಮ ಲೆಕ್ಕಿಗ ಪಿ.ಎಸ್.ನಾಗೇಂದ್ರ ಎಂಬವರು ಆ ನಾಲ್ವರ ಮರಣ ದೃಢೀಕರಣ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ, ಗ್ರಾಮಲೆಕ್ಕಿಗರ ಮತ್ತು ತಹಶೀಲ್ದಾರರ ಸಹಿಯನ್ನೂ ನಕಲು ಮಾಡಿ, ದಿನಾಂಕ ಮತ್ತು ವರ್ಷವನ್ನು ಸೃಷ್ಟಿಸಿ ಮರಣ ದೃಢೀಕರಣ ಪತ್ರವನ್ನು ನೀಡಿದ್ದರೆನ್ನಲಾಗಿದೆ.

ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕುಶಾಲಪ್ಪ ಅವರು ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ ದೂರಿನ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಸೋಮವಾರಪೇಟೆ ತಹಶೀಲ್ದಾರರಿಗೆ ಸೂಚಿಸಲಾಗಿತ್ತಲ್ಲದೆ, ತಹಶೀಲ್ದಾರರು ನಾಗೇಂದ್ರ ಅವರಿಗೆ ನೋಟೀಸ್ ನೀಡಿ ಈ ಆರೋಪದ ಬಗ್ಗೆ 24 ಗಂಟೆಗಳ ಒಳಗಾಗಿ ಸಮಜಾಯಿಷಿಕೆ ನೀಡುವಂತೆ ಸೂಚಿಸಲಾಗಿತ್ತು.

ಆದರೆ 2019ರ ಜು.18ರಂದು ಕಳುಹಿಸಿದ ನೋಟೀಸ್‍ಗೆ ನಾಗೇಂದ್ರ ಅವರು ಯಾವುದೇ ಸಮಜಾಯಿಷಿಕೆ ನೀಡದಿರುವ ಹಿನ್ನೆಲೆಯಲ್ಲಿ ಮತ್ತು ಅವರ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನೌಕರನ ವಿರುದ್ಧ ಕ್ರಮ ಜರುಗಿಸುವಂತೆ ಸಚಿವರು ಕೂಡಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಅದರಂತೆ ಇದೀಗ ಮಡಿಕೇರಿ ಉಪ ವಿಭಾಗಾಧಿಕಾರಿ ಜವರೇಗೌಡ ಅವರು, ಆರೋಪಿ ನಾಗೇಂದ್ರ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಮಾತ್ರ ಅರ್ಹರಾಗಿದ್ದು, ಈ ಅವಧಿಯಲ್ಲಿ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡದಿರುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News