ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Update: 2019-10-16 14:29 GMT

ಹೊಸದಿಲ್ಲಿ, ಅ.16: ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪತನಕ್ಕೆ ಕಾರಣಕರ್ತರಾಗಿರುವ ಅನರ್ಹ ಶಾಸಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಸದನದಲ್ಲೇ ಇದನ್ನು ಸ್ಪಷ್ಟಪಡಿಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಿ, ಸಮ್ಮಿಶ್ರ ಸರಕಾರವನ್ನು ಬೀಳಿಸಿದ್ದಾರೆ. ಅವರ ವಿರುದ್ಧ ನಾವೇ ಸ್ಪೀಕರ್‌ಗೆ ದೂರು ಕೊಟ್ಟು ಅನರ್ಹರನ್ನಾಗಿ ಮಾಡಿದ್ದೇವೆ. ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಎದುರಾಗಲ್ಲ ಎಂದರು.

ಬಿಜೆಪಿ ಸೇರಿದಂತೆ ಬೇರೆ ಪಕ್ಷಗಳಿಂದ ಯಾರಾದರೂ ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡು ಬಂದರೆ ಸ್ವಾಗತ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಇಲ್ಲ. ಕಾರ್ಯಕರ್ತರು ಒಪ್ಪಿಕೊಂಡಲ್ಲಿ ಮಾತ್ರ ಅನ್ಯ ಪಕ್ಷದಿಂದ ಬಂದವರನ್ನು ಪರಿಗಣಿಸುತ್ತೇವೆ. ಸದ್ಯಕ್ಕೆ ನಾವು ಯಾರನ್ನೂ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿಲ್ಲ ಎಂದು ಅವರು ಹೇಳಿದರು.

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಿ, ಅಂತಿಮಗೊಳಿಸಲಾಗಿದೆ. ಇನ್ನು ಮೂರ್ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಾಕಿಯಿದ್ದು, ಶೀಘ್ರದಲ್ಲೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ. ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಸರಕಾರದ ಹುಳುಕುಗಳು ಒಂದೊಂದಾಗಿ ಹೊರ ಬರುವ ಆತಂಕದಿಂದ ಅವರಿಗೆ ಅಧಿವೇಶನ ನಡೆಸಲು ಇಷ್ಟವಿರಲಿಲ್ಲ. ಈ ಅಧಿವೇಶನದಲ್ಲಿ ನೆರೆ ಸಮಸ್ಯೆ ಹಾಗೂ ಪ್ರಮುಖ ಇಲಾಖೆಗಳಲ್ಲಿನ ಬೇಡಿಕೆಗಳ ಮೇಲೆ ಚರ್ಚೆ ನಡೆಯಬೇಕಿತ್ತು. ಆದರೆ, ಸರಕಾರ ಅದಕ್ಕೆ ಅವಕಾಶವೇ ಕಲ್ಪಿಸಿಕೊಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವರ್ಗಾವಣೆ ದಂಧೆ ಮಾಡಿಕೊಂಡು ವಿಧಾನಸೌಧದಲ್ಲಿ ವ್ಯಾಪಾರ ಮಾಡುತ್ತಾ ಕೂತಿದ್ದಾರೆ. ನೆರೆ ಪರಿಹಾರ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅಧಿವೇಶನ ಮೊಟಕುಗೊಳಿಸಿದರು. ಆದರೆ, ಅಧಿವೇಶನ ಮುಕ್ತಾಯವಾದ ನಂತರ ಒಬ್ಬ ಸಚಿವರಾದರೂ ನೆರೆ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆಯೇ? ಸದನದಲ್ಲಿ ಸುಳ್ಳು ಹೇಳುವುದು ಎಂದರೆ ಜನರಿಗೆ ಸುಳ್ಳು ಹೇಳಿದಂತೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಈ ಸರಕಾರ ಸತ್ತು ಹೋಗಿದೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಈ ಸರಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ಇವರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರಲ್ಲ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿರುವವರು. ಇದೊಂದು ಅನೈತಿಕ ಸರಕಾರ, ಯಡಿಯೂರಪ್ಪ ಈ ಅನೈತಿಕ ಸರಕಾರದ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಅಭಿನಂದನೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕನನ್ನಾಗಿ ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನೇಮಕ ಮಾಡಿರುವುದರಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತರಲು ಎಲ್ಲ ಪ್ರಯತ್ನ ಮಾಡುತ್ತೇನೆ. ಎಲ್ಲ ನಾಯಕರು ಸೇರಿಕೊಂಡು ಕೋಮುವಾದಿ ಪಕ್ಷವನ್ನು ತೆಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ. ಇದೇ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಐಟಿ ದಾಳಿ ಕುರಿತು ಮಾತುಕತೆ ನಡೆಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ-ಕೇಶವಕೃಪ ತಾಳಕ್ಕೆ ಕುಣಿಯುವ ಸ್ಪೀಕರ್

ಹೊಸದಾಗಿ ಸ್ಪೀಕರ್ ಆಗಿರುವವರು ಬಿಜೆಪಿ ಹಾಗೂ ಕೇಶವಕೃಪದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ರಾಜ್ಯದ ವಿಧಾನಸಭೆಯ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಸ್ಪೀಕರ್ ಸಮಯ ನಿಗದಿಗೊಳಿಸಿದ್ದು ಇದೇ ಮೊದಲು. ನಾನು 1983ರಿಂದ ಸದನದಲ್ಲಿದ್ದೇನೆ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ 13 ಬಜೆಟ್‌ಗಳನ್ನು ಮಂಡಿಸಿದ್ದೇನೆ. ಎಂದಿಗೂ ಸದನದಲ್ಲಿ ವಿರೋಧ ಪಕ್ಷದವರ ಧ್ವನಿಯನ್ನು ಅಡಗಿಸುವ ಕೆಲಸ ಮಾಡಿಲ್ಲ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News