ವಿದೇಶಿ ಪಟಾಕಿ ಮಾರಾಟಕ್ಕೆ ಅನುಮತಿ ಇಲ್ಲ: ಬಸವರಾಜ ಬೊಮ್ಮಾಯಿ

Update: 2019-10-16 16:02 GMT

ಬೆಂಗಳೂರು, ಅ.16: ಭಾರತದ ದೇಶಿ ವ್ಯಾಪಾರ ನೀತಿಯಲ್ಲಿ ವಿದೇಶಗಳಿಂದ ಪಟಾಕಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿರುತ್ತದೆ. ವಿದೇಶಿ ಪಟಾಕಿಗಳಿಂದಾಗಿ ದೇಶೀಯ ಗೃಹ ಕೈಗಾರಿಕೆಗಳು, ಪ್ರಕೃತಿ ಸಾರ್ವಜನಿಕ ಭದ್ರತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದೀಪಾವಳಿ ಹಬ್ಬವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಪರವಾನಿಗೆಗಳನ್ನು ನೀಡುವಾಗ, ಸಂಬಂಧಪಟ್ಟ ಅಧಿಕಾರಿಗಳು ಸ್ಪೋಟಕ ಕಾಯ್ದೆ 2008, ನಿಯಮ 84ರ ಪ್ರಕಾರ ವಿದೇಶಿ ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಬಾರದು.

ಪಟಾಕಿಗಳನ್ನು ಮಾರಾಟ ಮಾಡಲು ಪರವಾನಿಗೆ ನೀಡುವಾಗ ಭಾರತೀಯ ತಯಾರಿಕಾ ಕಂಪನಿಗಳಿಗೆ ಮಾತ್ರ ಆದ್ಯತೆ ನೀಡುವಂತೆ, ವಿದೇಶದಿಂದ ಆಮದಾಗುವ ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿಯನ್ನು ನೀಡದಂತೆ ಹಾಗೂ ದೇಶಗಳಿಂದ ಆಮದಾಗುವ ಪಟಾಕಿಗಳನ್ನು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ.

ಒಂದು ವೇಳೆ ವಿದೇಶಗಳಿಂದ ಆಮದಾಗಿರುವ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡಲೇ ಈ ಬಗ್ಗೆ ದೂರು ನೀಡುವುದು ಹಾಗೂ ಪಟಾಕಿಗಳನ್ನು ಸಿಡಿಸುವಾಗ ಸಾರ್ವಜನಿಕರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News