ಚುನಾವಣಾ ಆಯೋಗ ಏಕೆ ಸರಕಾರದ ಮೇಲೆ ಕ್ರಮ ಕೈಗೊಂಡಿಲ್ಲ: ಹೈಕೋರ್ಟ್

Update: 2019-10-16 16:42 GMT

ಬೆಂಗಳೂರು, ಅ.16: ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿರುವ ಚುನಾವಣಾ ನೀತಿ ಸಂಹಿತೆ ಹಾಗೂ ಈ ಕ್ಷೇತ್ರಗಳಲ್ಲಿನ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ ಮಂಡಳಿಗೆ ನೇಮಕ ಮಾಡಿರುವ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.17ಕ್ಕೆ ಮುಂದೂಡಿದೆ.

ಗುಂಡೂರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು, ರಾಜ್ಯದಲ್ಲಿ ಚುನಾವಣೆ ಮುಂದೂಡಿಕೆಯಾಗಿದ್ದರೂ ಚುನಾವಣೆಯನ್ನು ಹಿಂಪಡೆಯಲಾಗಿಲ್ಲ. ಅಂದರೆ, ಚುನಾವಣಾ ದಿನಾಂಕ ಘೋಷಣೆ ಆದಾಗಿನಿಂದಲೂ ನೀತಿ ಸಂಹಿತೆ ಜಾರಿಯಲ್ಲಿರುತ್ತೆ. ನೀತಿ ಸಂಹಿತೆ ಮುಂದೂಡಿಕೆ ಬಗ್ಗೆ ವಕೀಲರು ಮಾಹಿತಿ ನೀಡಬೇಕು. ಅಲ್ಲದೆ, ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜ್ಯ ಸರಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಚುನಾವಣಾ ಆಯೋಗ ಏಕೆ ಸರಕಾರದ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಮನವಿ ಏನು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ 2019ರ ಸೆ.27ರಂದು ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿ ಮತ್ತು ನೀತಿ ಸಂಹಿತೆ ನವೆಂಬರ್ 11ರಿಂದ ಜಾರಿಗೆ ಬರುವಂತೆ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು. ಈ 15 ಕ್ಷೇತ್ರಗಳಲ್ಲಿನ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಅ.9ರಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News