ಪಾಂಡವಪುರ: ರಸ್ತೆ ಅಪಘಾತದಲ್ಲಿ ಪಿಎಸ್‍ಎಸ್‍ಕೆ ಇಂಜಿನಿಯರ್ ಮೃತ್ಯು

Update: 2019-10-16 16:54 GMT

ಪಾಂಡವಪುರ, ಅ.16: ರಸ್ತೆ ಅಪಘಾತದಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‍ಎಸ್‍ಕೆ) ಮುಖ್ಯ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ರೈಲ್ವೆ ನಿಲ್ದಾಣದ ಮೇಲ್ಸೇತುವೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದ್ದು, ಇವರ ಸಾವಿಗೆ ಪಿಎಸ್‍ಎಸ್‍ಕೆ ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿ ರೈತಸಂಘ ಕಾರ್ಯಕರ್ತರು, ಪಿಎಸ್‍ಎಸ್‍ಕೆ ನೌಕರರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಎಲೆಕ್ಟ್ರಿಕಲ್ ಮುಖ್ಯ ಇಂಜಿನಿಯರ್ ಆಗಿರುವ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬೆನಕನಕೆರೆ ಗ್ರಾಮದ ನಿವಾಸಿ ಬಿ.ಎಲ್.ವಸಂತ ಕುಮಾರ್(55) ಅಪಘಾತದಲ್ಲಿ ಮೃತಪಟ್ಟವರು.

ಪಿಎಸ್‍ಎಸ್‍ಕೆ ಅತಿಥಿ ಗೃಹದ ಬಳಿ ಇರುವ ವಸತಿ ಗೃಹಕ್ಕೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ತಕ್ಷಣವೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಸಂತಕುಮಾರ್ ಕೊನೆಯುಸಿರೆಳೆದರು ಎನ್ನಲಾಗಿದೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಹೆದ್ದಾರಿ ತಡೆದು ಪ್ರತಿಭಟನೆ: ಇಂಜನಿಯರ್ ವಸಂತಕುಮಾರ್ ಅವರ ಸಾವಿಗೆ ಕಾರ್ಖಾನೆ ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿ ರೈತಸಂಘ ಕಾರ್ಯಕರ್ತರು, ಪಿಎಸ್‍ಎಸ್‍ಕೆ ನೌಕರರು ರಸ್ತೆಯಲ್ಲೇ ಶವವಿಟ್ಟು ಮೈಸೂರು-ಶಿವಮೊಗ್ಗ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ವಸಂತ್‍ ಕುಮಾರ್ ಅವರನ್ನು ಕೆ.ಆರ್.ಆಸ್ಪತ್ರೆಗೆ ಸೇರಿಸುವ ಬದಲು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರೆ ಬದುಕುತ್ತಿದ್ದರು. ಪಿಎಸ್‍ಎಸ್‍ಕೆ 28 ತಿಂಗಳಿಂದ ಸಂಬಳ ನೀಡಿರದ ಕಾರಣ ಅವರ ಕುಟುಂಬದ ಬಳಿ ಹಣವಿರಲಿಲ್ಲ. ಹಾಗಾಗಿ ಪಿಎಸ್‍ಎಸ್‍ಕೆ ಆಡಳಿತ ಮಂಡಳಿ ಸಾವಿಗೆ ಕಾರಣವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಎಂ.ರವೀಂದ್ರ ಅವರು ಮನವಿಗೂ ಪ್ರತಿಭಟನಾಕಾರರು ಸ್ಪಂದಿಸಲಿಲ್ಲ. ಆಗ ದೂರವಾಣಿ ಮೂಲಕ ಕಾರ್ಖಾನೆ ವ್ಯವಸ್ಥಾಪಕರು ಮೃತರ ಕುಟುಂಬಕ್ಕೆ ಶವ ಸಂಸ್ಕಾರದ ಖರ್ಚಿಗೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡಲು ಆದೇಶಿಸಿ, ಸಂಬಳ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಪಿ.ನಾಗರಾಜು, ಹರವು ಪ್ರಕಾಶ್, ಪಿಎಸ್‍ಎಸ್‍ಕೆ ನೌಕರರ ಸಂಘದ ಅಧ್ಯಕ್ಷ ಹಿರೇಮರಳಿ ರಾಜಶೇಖರ್, ಪಿಎಸ್‍ಎಸ್‍ಕೆ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಸತೀಶ್ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News