ಮಂಡ್ಯ: ಜೆಡಿಎಸ್‍ನಿಂದ ರೈತರ ಸಾಲಮನ್ನಾ ಕೈಪಿಡಿ ಬಿಡುಗಡೆ

Update: 2019-10-16 16:57 GMT

ಮಂಡ್ಯ, ಅ.16: ಜಿಲ್ಲೆಯ 92,350 ಮಂದಿ ರೈತರು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.

ಜೆಡಿಎಸ್ ಹೊರತಂದಿರುವ ಸಾಲಮನ್ನಾ ಕೈಪಿಡಿಯನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‍ನ 418.43 ಕೋಟಿ ರೂ. ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ 136 ಕೋಟಿ ರೂ. ಸಾಲಮನ್ನಾ ಆಗಿದೆ ಎಂದರು.

ಸಂಪೂರ್ಣ ಬಹುಮತ ಬರದಿದ್ದರೂ ಕುಮಾರಸ್ವಾಮಿ ಅವರು ರೈತರಿಗೆ ನೀಡಿದ ಭರವಸೆ ಈಡೇರಿಸಲು ಮುಂದಾದರು. ಆದರೆ, ರೈತರ ಸಾಲಮನ್ನಾ ಆಗಿಲ್ಲವೆಂದು ಬಿಜೆಪಿ ಮತ್ತು ಕೆಲ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ಜೆಡಿಎಸ್ ಹೊರತಂದಿರುವ ಕೈಪಿಡಿಯಲ್ಲಿ ಸಾಲಮನ್ನಾ ಪ್ರಯೋಜನ ಪಡೆದಿರುವ ರಾಜ್ಯದ ಜಿಲ್ಲಾವಾರು, ತಾಲೂಕುವಾರು, ಗ್ರಾಮವಾರು ರೈತರ ಸಂಪೂರ್ಣ ಮಾಹಿತಿ ಇದೆ. ಈ ಸತ್ಯವನ್ನು ಮಾಧ್ಯಮಗಳು ಪ್ರಚಾರ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಕೇಂದ್ರದ ಬಿಜೆಪಿ ಮತ್ತು ರಾಜ್ಯ ಸರಕಾರಗಳು ರೈತರನ್ನು ಸಂಪೂರ್ಣ ಕಡೆಗಣಿಸಿವೆ ಎಂದು ಆರೋಪಿಸಿದ ಅವರು, ನೆರೆ ಸಂತ್ರಸ್ತರಿಗೆ ಹಣ ಒದಗಿಸುವುದೇ ಕಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ನಿನ್ನೆ ಬೆಳಗಾವಿಯಲ್ಲಿ ಹೇಳಿಕೊಂಡಿದ್ದಾರೆಂದು ವ್ಯಂಗ್ಯವಾಡಿದರು.

ರಾಜ್ಯ ಸರಕಾರ ಕೂಡಲೇ ಮೈಷುಗರ್, ಪಿಎಸ್‍ಎಸ್‍ಕೆ ವ್ಯಾಪ್ತಿ ಕಬ್ಬನ್ನು ಬೇರೆಡೆ ಸಾಗಿಸಿ ಅರೆಯುವ ಕೆಲಸ ಮಾಡಬೇಕು. ಹೊಸ ಮೈಷುಗರ್ ಕಾರ್ಖಾನೆ ಆರಂಭಿಸಬೇಕು. ಪಿಎಸ್‍ಎಸ್‍ಕೆ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News