ಬೆಳೆ ಹಾನಿಗೆ ದೇಶದಲ್ಲೆ ಹೆಚ್ಚು ಪರಿಹಾರ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-16 17:10 GMT

ಬೆಳಗಾವಿ, ಅ.16: ಬೆಳೆಹಾನಿಗೆ ದೇಶದಲ್ಲಿಯೇ ಮೊದಲ ಬಾರಿಗೆ ಅತೀ ಹೆಚ್ಚು ಪರಿಹಾರವನ್ನು ನೀಡಲಾಗುತ್ತಿದೆ. ಒಣ ಹಾಗೂ ನೀರಾವರಿ ಆಶ್ರಿತ ಬೆಳೆಗಳಿಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ ಹತ್ತು ಸಾವಿರ ರೂಪಾಯಿ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪತಿಳಿಸಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಣ ಬೇಸಾಯದ ಬೆಳೆಗೆ ಮೊದಲು ಆರು ಸಾವಿರ ಹಾಗೂ ನೀರಾವರಿ ಬೆಳೆಗೆ 13 ಸಾವಿರ ರೂ.ಪರಿಹಾರ ನೀಡಲಾಗುತ್ತಿತ್ತು. ಇದೇ ಮೊದಲ ಸಲ ಹತ್ತು ಸಾವಿರ ರೂ.ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.

ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ಈಗಾಗಲೇ ಐದು ಲಕ್ಷ ರೂಪಾಯಿ ಘೋಷಿಸಲಾಗಿದ್ದು, ಇಷ್ಟೊಂದು ಪರಿಹಾರ ನೀಡುತ್ತಿರುವುದು ಕೂಡ ಇದೇ ಮೊದಲ ಬಾರಿ ಎಂದು ಅವರು ಹೇಳಿದರು.

ಔರಾದ್ಕರ್ ವರದಿ ಶೀಘ್ರವೇ ಜಾರಿ: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಔರಾದ್ಕರ್ ವರದಿಯನ್ನು ತಕ್ಷಣ ಜಾರಿ ಮಾಡಲಾಗುವುದು. ಮುಂಬೈ ಕರ್ನಾಟಕವನ್ನು ‘ಕಿತ್ತೂರು ಕರ್ನಾಟಕ’ ಎಂದು ಘೋಷಿಸುವ ಬಗ್ಗೆ ಚರ್ಚೆ ನಡೆದಿದ್ದು, ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಮಹಾದೇವಪ್ಪಯಾದವಾಡ, ದುರ್ಯೋಧನ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News