ತೇಜೋವಧೆಗೆ ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ: ಸಾ.ರಾ.ಮಹೇಶ್

Update: 2019-10-16 17:42 GMT

ಮೈಸೂರು,ಅ.16: ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹಾಕಿರುವ ಸವಾಲಿಗೆ ನಾನು ಸಿದ್ದನಿದ್ದು, ಅ.17 ರ ಗುರುವಾರ ಬೆಳಿಗ್ಗೆ 9 ಗಂಟೆಗೆ ನಾನು ಚಾಮುಂಡಿ ಬೆಟ್ಟಕ್ಕೆ ಬಂದು ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ನಾನು ಹೇಳಿರುವುದು ಸತ್ಯ ಎಂದು ಪ್ರಮಾಣ ಮಾಡುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನನ್ನ ಕುಟುಂಬ ಹಣವನ್ನು ಪಡೆದಿಲ್ಲ. ಆಸೆ ಆಮಿಷಗಳಿಗೆ ಬಲಿಯಾಗಿಲ್ಲ ಎಂದು ತಾಯಿ ಮೇಲೆ ಎಚ್.ವಿಶ್ವನಾಥ್ ಆಣೆ ಮಾಡಿದರೆ ರಾಜ್ಯದ ಜನತೆಯಲ್ಲಿ ಬೇಷರತ್ ಕ್ಷಮೆ ಯಾಚಿಸುವೆ. ತಾವು ಪಡೆದ ಹಣವೆಷ್ಟು ? ಮುಖ್ಯ ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರ ಬಳಿ ಎಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದೀರಿ. ನಮ್ಮ ಫಾರಂ ಹೌಸ್ ನಲ್ಲಿ ನಡೆದ ವ್ಯವಹಾರ ಎಲ್ಲವನ್ನು ನಾಳೆ ಬಹಿರಂಗಗೊಳಿಸುವೆ ಎಂದು ಹೇಳಿದರು.

ಎಲ್ಲರಿಂದ ತಿರಸ್ಕರಿಸಿದ ವಿಶ್ವನಾಥ್ ಅವರನ್ನು ಜಿ.ಟಿ.ದೇವೇಗೌಡರ ವಿರೋಧದ ನಡುವೆಯೂ ಕರೆತಂದು ಶಾಸಕರನ್ನಾಗಿ ಮಾಡಿದ್ದೆವು. ಈಗ ಯಾವ ಅಧಿಕಾರದ ಮೇಲೆ ಹುಣಸೂರಿನಲ್ಲಿ ಗುದ್ದಲಿ ಪೂಜೆ ಮಾಡುತ್ತೀರಿ ? ಹುಣಸೂರಿನಲ್ಲಿ ಅವರಾಗಲಿ ಅವರ ಕುಟುಂಬದವರಾಗಲಿ ಅಭ್ಯರ್ಥಿಯಾಗುವುದಿಲ್ಲ. ಈಗಾಗಲೇ ಈ ಬಗ್ಗೆ ನಿರ್ಧಾರವಾಗಿದೆ. ಯಾರು ಅಭ್ಯರ್ಥಿಯೆಂದು ತಿಳಿದಿದೆ. ನ್ಯಾಯಲಯದ ತೀರ್ಪು ಬಂದ ಮೇಲೆ ಉಸ್ತುವಾರಿ ಸಚಿವರನ್ನಾಗಿ ಮಾಡಲು ಈಗಾಗಲೇ ನಿರ್ಧಾರವಾಗಿದೆ ಎಂದರು.

ಹುಣಸೂರಿನಲ್ಲಿ ಮುಂಬರುವ ಚುನಾವಣೆಯಲ್ಲಿ ಬೆಂಗಳೂರು ಮೂಲದವರು ಅಭ್ಯರ್ಥಿಯಾಗಲಿದ್ದು. ಹೊರ ಜಿಲ್ಲೆಯವರೇ ಕಣಕ್ಕಿಳಿಯಲಿದ್ದಾರೆ. ವರದಿ ಪ್ರಕಾರ ವಿಶ್ವನಾಥ್ ಅವರು ಕಣಕ್ಕಿಳಿದರೆ ಮೂರನೇ ಸ್ಥಾನಕ್ಕೆ ಇಳಿಯಲಿದ್ದಾರೆ. ಆದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ವೈಯುಕ್ತಿಕ ತೇಜೋವಧೆ ಹಾಗೂ ರಾಜಕೀಯ ಮೇಲಾಟದಿಂದ ಮನ ನೊಂದು ಸೆ.18ರಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಈ ಬಗ್ಗೆ ಸ್ಪೀಕರ್ ಪರಿಶೀಲನೆ ನಡೆಸುತ್ತಿದ್ದಾರೆ. ಇಂದಿಗೂ ವಾಪಸ್ ಪಡೆದಿಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ರಾಜಣ್ಣ, ಪ್ರಕಾಶ್, ರವಿಚಂದ್ರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News