ನೇರ ನೇಮಕಾತಿ ಆದೇಶದಿಂದ ಹೊರಗುತ್ತಿಗೆ ನೌಕರರು ಅತಂತ್ರ: ರಾಧಾ ಸುಂದರೇಶ್ ಆರೋಪ

Update: 2019-10-16 18:08 GMT

ಚಿಕ್ಕಮಗಳೂರು, ಅ.16: ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿಯಡಿ ನೇಮಕಗೊಂಡಿರುವ ನೌಕರರನ್ನು ವೇತನ ನೀಡದೇ ಕೆಲಸದಿಂದ ಕಿತ್ತು ಹಾಕುವ ಹುನ್ನಾರ ರಾಜ್ಯ ಸರಕಾರ ಮಾಡುತ್ತಿದ್ದು, ಇದನ್ನು ಕೂಡಲೇ ಕೈಬಿಟ್ಟು ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ನೀಡಬೇಕೆಂದು ಒತ್ತಾಯಿಸಿ ನೌಕರರು ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಧರಣಿ ನಡೆಸಿದರು.

ಎಐಟಿಯುಸಿ ಹಾಗೂ ಕರ್ನಾಟಕ ರಾಜ್ಯ ವಸತಿ ಶಾಲೆ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿ ಒಕ್ಕೂಟದ ಮುಖಂಡರಾದ ರಾಧಾ ಸುಂದರೇಶ್, ಬಿ.ಅಮ್ಜದ್, ಜಿ.ರಘು, ವಿಜಯ್‍ ಭಾಸ್ಕರ್ ಮತ್ತಿತರರ ನೇತೃತ್ವದಲ್ಲಿ ಬುಧವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ದಿಢೀರ್ ಧರಣಿ ನಡೆಸಿದ ನೂರಾರು ಹೊರಗುತ್ತಿಗೆ ನೌಕರರು ಸರಕಾರಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ರಾಧಾ ಸುಂದರೇಶ್, ರಾಜ್ಯಾದ್ಯಂತ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 3312 ಹೊರ ಗುತ್ತಿಗೆ ನೌಕರರು ಕೆಲಸ ಕಳೆದು ಕೊಳ್ಳುವ ಆತಂಕದಲ್ಲಿದ್ದಾರೆ. ಈ ನೌಕರರನ್ನು ಕಳೆದ 10-15 ವರ್ಷಗಳವರೆಗೆ ದುಡಿಸಿಕೊಂಡಿರುವ ಸರಕಾರ ಇದೀಗ ದಿಢೀರನೆ ಕೈಬಿಟ್ಟು ನೇರ ನೇಮಕಾತಿ ಮೂಲಕ ಹೊಸ ನೌಕರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಆದೇಶ ನೀಡಿದೆ. ಈ ಆದೇಶದಿಂದಾಗಿ ಇದುವರೆಗೂ ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾವಿರಾರರು ನೌಕರರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಹೊರ ಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕೆಲಸದಿಂದ ಕಿತ್ತು ಹಾಕದೇ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ನೌಕರರಿಗೆ ಸರಕಾರವೇ ವೇತನ ನೀಡುವಂತಹ ವ್ಯವಸ್ಥೆ ರೂಪಿಸಬೇಕೆಂದು ಸಂಘಟನೆ ವತಿಯಿಂದ ಮನವಿ ಮಾಡಲಾಗಿತ್ತು. ಅಂದಿನ ಸರಕಾರ ಮನವಿಯನ್ನು ಪರಿಶೀಲಿಸಿ ವೇತನವಿಲ್ಲದೇ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ನೌಕರರನ್ನು 6 ತಿಂಗಳವರೆಗೆ ವೇತನ ನೀಡಿ ಉದ್ಯೋಗದಲ್ಲಿ ಮುಂದುವರಿಸಿತ್ತು. ಆದರೆ ಈಗಿನ ಬಿಜೆಪಿ ಸರಕಾರ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಬದಲಿಗೆ ನೇರ ನೇಮಕಾತಿ ಮೂಲಕ ಹೊಸ ನೌಕರರನ್ನು ನೇಮಿಸಿಕೊಳ್ಳಲು ಆದೇಶ ನೀಡಿದ್ದು, ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ ವೇತನವನ್ನೂ ನೀಡದೇ ಬೀದಿಪಾಲು ಮಾಡಲು ಮುಂದಾಗಿದೆ ಎಂದು ಆರೋಪಿಸಿದ ಅವರು ಜಿಲ್ಲೆಯಲ್ಲಿ ಈ ಆದೇಶದಿಂದಾಗಿ ನೂರಾರು ನೌಕರರು ಕೆಲಸ ಕಳೆದುಕೊಳ್ಳವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆಂದರು.

ರಾಜ್ಯ ಸರಕಾರ ಈ ಕೂಡಲೇ ನೇರ ನೇಮಕಾತಿ ಆದೇಶವನ್ನು ಕೈಬಿಟ್ಟು ಹಾಲಿ ಇರುವ ನೌಕರರನ್ನೇ ಮುಂದುವರಿಸಬೇಕು. ಅಲ್ಲದೇ ಬಾಕಿ ವೇತವನ್ನು ಬಿಡುಗಡೆ ಮಾಡುವುದರೊಂದಿಗೆ ನೌಕರರಿಗೆ ಸರಕಾರದಿಂದಲೇ ವೇತನ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದ ಅವರು, ಈ ಬೇಡಿಕೆಯನ್ನು ಈಡೇರಿಸಲು ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡುತ್ತಿದ್ದು, ಯಾವುದೇ ಕ್ರಮ ವಹಿಸದಿದ್ದಲ್ಲಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವ ಚಳವಳಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ಬಿ.ಅಮ್ಜದ್ ಮಾತನಾಡಿ, ಹೊರಗುತ್ತಿಗೆ ಪದ್ಧತಿಯು ಜೀತಪದ್ಧತಿಗೆ ಸಮನಾಗಿದ್ದು, ಗುತ್ತಿಗೆ ಪಡೆದು ನೌಕರರನ್ನು ಉದ್ಯೋಗಕ್ಕೆ ನೇಮಿಸಿಕೊಂಡ ಸಂಸ್ಥೆಗಳು ಸಿಬ್ಬಂದಿಗೆ ಸರಿಯಾಗಿ ವೇತನ ನೀಡದೇ ಕಾನೂನುಗಳನ್ನು ಗಾಳಿಗೆ ತೂರಿ ಕೆಲಸ ಮಾಡಿಸಿಕೊಳ್ಳುತ್ತಿವೆ. ನೌಕರರನ್ನು ಬಳಸಿ ಎಸೆಯುವ ವಸ್ತುಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದ ಅವರು, ಇಂತಹ ಅಮಾನವೀಯ ಪದ್ಧತಿಯನ್ನು ರದ್ದು ಮಾಡಬೇಕೆಂದು ಸಂಘಟನೆ ವತಿಯಿಂದ ಈ ಹಿಂದೆಯೇ ಮನವಿ ಮಾಡಲಾಗಿದೆ. ಆದರೆ ಸರಕಾರಗಳು ಇದನ್ನು ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿದರು.

ನೌಕರರ ಧರಣಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರಗಳು ರೈತರು, ಬಡವರು, ಕಾರ್ಮಿಕರ ವಿರೋಧಿಗಳಾಗಿದ್ದು, ಕೋಟ್ಯಾಂತರ ಉದ್ಯೋಗ ಸೃಷ್ಟಿಸುತ್ತೇವೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಆಡಳಿತದಿಂದಾಗಿ ಇರುವ ಉದ್ಯೋಗಗಳನ್ನೇ ತೆಗೆದು ಹಾಕಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ ಎಂದ ಅವರು, ಕಾರ್ಮಿಕರ ಬದುಕಿಗೆ ಕೊಡಲಿಪೆಟ್ಟು ನೀಡುವ ನೇರನೇಮಕಾತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನು ಸರಕಾರಿ ಇಲಾಖೆಗಳಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿದರು.

ಧರಣಿ ಬಳಿಕ ಮುಖಂಡರು ಹಾಗೂ ನೌಕರರು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಮನವಿ ಪತ್ತ ಸಲ್ಲಿಸಿದರು. ಧರಣಿಯಲ್ಲಿ ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News