ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ಸ್ವೀಕರಿಸಿದ ಸರಕಾರ

Update: 2019-10-16 18:16 GMT

ಬೆಂಗಳೂರು,ಅ.16: ಐಪಿಎಸ್ ಅಧಿಕಾರಿ ಅಣ್ಣಾಮಲೈಯವರ ರಾಜೀನಾಮೆಯನ್ನು ಸರಕಾರ ಸ್ವೀಕರಿಸಿದೆ. ಐಪಿಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಮೇ 28ರಂದು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡುವ ವೇಳೆ ಅವರು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತರಾಗಿ (ಡಿಸಿಪಿ) ಸೇವೆ ಸಲ್ಲಿಸುತ್ತಿದ್ದರು. 

ಇದಕ್ಕೂ ಮೊದಲು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ ನಿಯುಕ್ತಿಗೊಂಡಿದ್ದ ಅಣ್ಣಾಮಲೈಯವರ ಕಾರ್ಯದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಪರಿಗಣಿಸಿದ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಣ್ಣಾಮಲೈಯನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ನೇಮಿಸಿ ಅಪರಾಧ ನಿಯಂತ್ರಣದ ವಿಶೇಷ ಜವಾಬ್ದಾರಿಯನ್ನು ನೀಡಿದ್ದರು. ಐಐಎಂ-ಲಕ್ನೊದ ಎಂಬಿಎ ಪದವೀಧರ ಇಂಜಿನಿಯರ್ ತಮಿಳುನಾಡು ಮೂಲದ ಅಣ್ಣಾಮಲೈ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ರಾಜಕೀಯಕ್ಕೆ ಧುಮುಕುವ ಬಗ್ಗೆ ಊಹಾಪೋಹಗಳು ದಟ್ಟವಾಗಿದೆ. ರಾಜೀನಾಮೆ ನಂತರ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ, ಸದ್ಯ ಎಲ್ಲ ಕೆಲಸಗಳಿಂದ ಬಿಡುವು ತೆಗೆದುಕೊಳ್ಳಲಿದ್ದೇನೆ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ವೃತ್ತಿಜೀವನದ ಸಾಧ್ಯತೆಗಳ ಬಗ್ಗೆ ಮುಂದಿನ ಆರು ತಿಂಗಳೊಳಗಾಗಿ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News