ಮದೀನಾ ನಗರ ಸಮೀಪ ಭೀಕರ ಅಪಘಾತ: 35 ವಿದೇಶಿ ಯಾತ್ರಿಗಳು ಮೃತ್ಯು

Update: 2019-10-17 14:48 GMT

ರಿಯಾದ್,ಅ.17: ಮುಸ್ಲಿಮರ ಪವಿತ್ರ ನಗರ ಮದೀನಾ ಸಮೀಪ ಬುಧವಾರ ಖಾಸಗಿ ಬಸ್ಸೊಂದು ಎಕ್ಸ್‌ಕವೇಟರ್ ಅಥವಾ ನೆಲ ಅಗೆಯುವ ಬೃಹತ್ ಯಂತ್ರಕ್ಕೆ ಢಿಕ್ಕಿ ಹೊಡೆದ ಪರಿಣಾಮ 35 ವಿದೇಶಿಯರು ಮೃತಪಟ್ಟಿದ್ದು,ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಮದೀನಾ ಪೊಲೀಸರನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜೆನ್ಸಿ (ಎಸ್‌ಪಿಎ) ವರದಿ ಮಾಡಿದೆ.

ಮೃತರು ಅರಬ್ ಮತ್ತು ಏಷ್ಯಾದ ಯಾತ್ರಿಗಳಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಅಪಘಾತಕ್ಕೀಡಾದ ಬಸ್ ಬೆಂಕಿಯಲ್ಲಿ ಉರಿಯುತ್ತಿದ್ದ ಚಿತ್ರಗಳನ್ನೂ ಅವು ಪ್ರಕಟಿಸಿವೆ.

ಗಾಯಾಳುಗಳನ್ನು ಅಲ್-ಹಮ್ಮಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅಧಿಕಾರಿಗಳು ತನಿಖೆಯನ್ನಾರಂಭಿಸಿದ್ದಾರೆ ಎಂದು ಎಸ್‌ಪಿಎ ತಿಳಿಸಿದೆ.

2018,ಎಪ್ರಿಲ್‌ನಲ್ಲಿ ಪವಿತ್ರ ಮಕ್ಕಾ ನಗರಕ್ಕೆ ಸಾಗುತ್ತಿದ್ದ ಬಸ್ ಇಂಧನ ಟ್ಯಾಂಕರ್‌ಗೆ ಢಿಕ್ಕಿ ಹೊಡೆದು ನಾಲ್ವರು ಬ್ರಿಟಿಷ್ ಯಾತ್ರಿಗಳು ಮೃತಪಟ್ಟು ಇತರ 12 ಜನರು ಗಾಯಗೊಂಡಿದ್ದರು.

 2017,ಜನವರಿಯಲ್ಲಿ ಮಕ್ಕಾ ಯಾತ್ರೆಯನ್ನು ಮುಗಿಸಿ ಮದೀನಾದತ್ತ ಸಾಗುತ್ತಿದ್ದ ಮಿನಿಬಸ್ ಅಪಘಾತಕ್ಕೆ ಗುರಿಯಾಗಿ ಎರಡು ತಿಂಗಳ ಮಗು ಸೇರಿದಂತೆ ಆರು ಬ್ರಿಟನ್ ಪ್ರಜೆಗಳು ಮೃತಪಟ್ಟಿದ್ದರು.

ಸೌದಿ ಅರೇಬಿಯಾ ತನ್ನ ತೈಲ ಅವಲಂಬಿತ ಆರ್ಥಿಕತೆಯ ಸ್ವರೂಪವನ್ನು ಬದಲಿಸುವ ಪ್ರಯತ್ನದ ಅಂಗವಾಗಿ ವರ್ಷವಿಡೀ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಯಸಿದೆ. ವಿಶ್ವಾದ್ಯಂತದಿಂದ ಮಿಲಿಯಾಂತರ ಯಾತ್ರಿಗಳು ಸೌದಿಗೆ ಭೇಟಿ ನೀಡುತ್ತಾರೆ.

ಕಳೆದ ತಿಂಗಳವರೆಗೂ ಸೌದಿ ಅರೇಬಿಯಾ ಕೇವಲ ಮುಸ್ಲಿಂ ಯಾತ್ರಿಗಳು,ವಿದೇಶಿ ಕಾರ್ಮಿಕರು ಮತ್ತು ಇತ್ತೀಚಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಕರಿಗೆ ವೀಸಾಗಳನ್ನು ನೀಡುತ್ತಿತ್ತು. ಆದರೆ ತೈಲೋತ್ತರ ಯುಗಕ್ಕಾಗಿ ಬೃಹತ್ ಅರಬ್ ಆರ್ಥಿಕತೆಗೆ ಸಜ್ಜಾಗಲು ತನ್ನ ಅಭಿಯಾನದ ಅಂಗವಾಗಿ ಈಗ ಪ್ರವಾಸಿಗಳು ದೇಶಕ್ಕೆ ಭೇಟಿ ನೀಡಲು ಅವಕಾಶವನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News