ಅಕ್ಷರ ದಾಸೋಹ ನೌಕರರಿಗೆ ಪಿಂಚಣಿ ಸೌಲಭ್ಯ ಶೀಘ್ರಜಾರಿಗೊಳಿಸಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ

Update: 2019-10-17 18:07 GMT

ಶಿವಮೊಗ್ಗ, ಅ. 17: ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ವಿಶೇಷ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಗುರುವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಪಂ ಆಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 2001-02 ನೇ ಸಾಲಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಶಾಲೆಗಳಲ್ಲಿ ಆರಂಭಿಸಿದ ಬಿಸಿಯೂಟ ಯೋಜನೆಯಡಿ ಲಕ್ಷಾಂತರ ಕಾರ್ಯಕರ್ತೆಯರು ಕಾಯನಿರ್ವಹಿಸುತ್ತಿದ್ದಾರೆ. ಕಳೆದ 17 ವರ್ಷಗಳಿಂದ ನೌಕರರಿಗೆ ಸಮರ್ಪಕ ವೇತನ, ಸೌಲಭ್ಯ ಕಲ್ಪಿಸದೇ ವಂಚಿಸಿಕೊಂಡು ಬರಲಾಗುತ್ತಿದೆ ಎಂದು ನೌಕರರು ದೂರಿದ್ದಾರೆ.

ನೌಕರರಿಗೆ ಕನಿಷ್ಟ ಪಿಂಚಣಿ ವ್ಯವಸ್ಥೆಯನ್ನಾದರೂ ಸರಕಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಹಲವು ಬಾರಿ ಹೋರಾಟ ನಡೆಸಿಕೊಂಡು ಬರಲಾಗಿತ್ತು. ಇದೆಲ್ಲದರ ಪರಿಣಾಮ ಸರಕಾರವು ಭವಿಷ್ಯ ನಿಧಿ ಪಿಂಚಣಿ ಸೌಲಭ್ಯ ಜಾರಿಯ ಭರವಸೆ ನೀಡಿತ್ತು. ಅದರಂತೆ ನೌಕರರ ವೇತನದಲ್ಲಿ 100 ರೂ. ಕಡಿತ ಹಾಗೂ ಸರಕಾರ 150 ರೂ. ಭರಿಸಿ ಎಲ್‌ಐಸಿಯಲ್ಲಿ ತೊಡಗಿಸಲು ನಿರ್ಧರಿಸಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೋರಾಟದ ವೇಳೆಯೂ ಸಚಿವ ಸುರೇಶ್‌ಕುಮಾರ್ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಸರಕಾರ ಹೊರಡಿಸಿದ ಆದೇಶದಲ್ಲಿ, ಪ್ರಧಾನಮಂತ್ರಿ ‘ಶ್ರಮ ಯೋಗಿ ಮನ್ ಧನ್’ ಪಿಂಚಣಿ ಯೋಜನೆಗೆ ಶಾಲಾ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶ ಹೊರಡಿಸಿದೆ. ಇದು ನೌಕರರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯು ತಾತ್ಕಾಲಿಕವಾಗಿದ್ದು, 40 ವರ್ಷ ವಯೋಮಾನದೊಳಗಿರಬೇಕು. ಈ ಎಲ್ಲ ಕಾರಣಗಳಿಂದ ಮೊದಲು ನೀಡಿದ್ದ ಭರವಸೆಯಂತೆ ಪಿಂಚಣಿ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಎಸ್.ಬಿ.ಶಿವಶಂಕರ್, ಬಿಸಿಯೂಟ ಸಂಘಟನೆಯ ಜಿ.ಜಿ.ಅಕ್ಕಮ್ಮ, ಹನುಮಮ್ಮ ಸೇರಿದಂತೆಮೊದಲಾದವರು ಉಪಸ್ಥಿತರಿದ್ದರು.

‘17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಮರ್ಪಕ ಸೌಲಭ್ಯವಿಲ್ಲ’

2001-02 ನೇ ಸಾಲಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಶಾಲೆಗಳಲ್ಲಿ ಆರಂಭಿಸಿದ ಬಿಸಿಯೂಟ ಯೋಜನೆಯಡಿ ಲಕ್ಷಾಂತರ ಕಾರ್ಯಕರ್ತೆಯರು ಕಾಯನಿರ್ವಹಿಸುತ್ತಿದ್ದಾರೆ. ಕಳೆದ 17 ವರ್ಷಗಳಿಂದ ನೌಕರರಿಗೆ ಸಮರ್ಪಕ ವೇತನ, ಸೌಲಭ್ಯ ಕಲ್ಪಿಸದೇ ವಂಚಿಸಿಕೊಂಡು ಬರಲಾಗುತ್ತಿದೆ ಎಂದು ಬಿಸಿಯೂಟ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News