ವೇತನ ನೀಡುವಲ್ಲಿ ನಿರ್ಲಕ್ಷ ಆರೋಪ: ಗ್ರಾಪಂ ನೌಕರರಿಂದ ಜಿಪಂ ಎದುರು ಧರಣಿ

Update: 2019-10-17 18:28 GMT

ಚಿಕ್ಕಮಗಳೂರು, ಅ.17: ಗ್ರಾಪಂ ನೌಕರರಿಗೆ ರಾಜ್ಯ ಸರಕಾರ ವೇತನ ಹೆಚ್ಚಿಸಿ ವಿವಿಧ ಸೌಲಭ್ಯಗಳನ್ನು ನೀಡಲು ಆದೇಶ ಹೊರಡಿಸಿದ್ದರೂ ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನೌಕರರಿಗೆ ಯಾವುದೇ ಸೌಲಭ್ಯಗಳು ಸಿಗದಂತಾಗಿದೆ. 20 ತಿಂಗಳಿಂದ ನೌಕರರು ವೇತನವಿಲ್ಲದೇ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಪಂ ನೌಕರರ ಫೆಡರೇಶನ್‌ನ ರಾಜ್ಯ ಕಾರ್ಯದರ್ಶಿ ವಿಜಯ್‌ಕುಮಾರ್ ಆರೋಪಿಸಿದ್ದಾರೆ.

ನಗರದ ಜಿಪಂ ಕಚೇರಿ ಎದುರು ವಿವಿಧ ಬೇಡಿಕೆಗಳ ಪೂರೈಕೆಗೆ ಆಗ್ರಹಿಸಿ ಗುರುವಾರ ಜಿಲ್ಲಾ ಗ್ರಾಪಂ ನೌಕರರ ಫೆಡರೇಶನ್‌ನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಈಗಾಗಲೇ ಗ್ರಾಪಂ ನೌಕರರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಆದೇಶ ಹೊರಡಿಸಿದೆ. ಆದರೆ ಜಿಪಂ, ಗ್ರಾಪಂ, ತಾಪಂ ಅಧಿಕಾರಿಗಳು ಆದೇಶಗಳನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷ ವಹಿಸಿರುವುದರಿಂದ ನೌಕರರ ಬದುಕು ಮುರಾಬಟ್ಟೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 10-15ವರ್ಷಗಳಿಂದ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸಿದ್ದರೂ ಡಿ.ದರ್ಜೆ ನೌಕರರಿಗೆ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಭಡ್ತಿ ನೀಡಿಲ್ಲ. ಬಿಲ್ ಕಲೆಕ್ಟರ್‌ಗಳಿಗೆ ಕುಂಟು ನೆಪವೊಡ್ಡಿ ಕಾರ್ಯದರ್ಶಿ ಹುದ್ದೆ ನೀಡದೇ ವಂಚಿಸುತ್ತಿದ್ದಾರೆ ಎಂದ ಅವರು, ಗ್ರಾಪಂಗಳಲ್ಲಿ 10 ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನೂರಾರು ನೌಕರರನ್ನು ವಿದ್ಯಾರ್ಹತೆ ಇಲ್ಲವೆಂಬ ಕಾರಣವೊಡ್ಡಿ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ನೇರನೇಮಕಾತಿ ಮೂಲಕ ಹೊಸ ನೌಕರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸೇವೆ ಸಲ್ಲಿಸಿದ ನೌಕರರು ಮತ್ತು ಅವರ ಕುಟುಂಬ ಬೀದಿಪಾಲಾಗುವ ಸ್ಥಿತಿಗೆ ತಲುಪಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಗ್ರಾಪಂಗಳಲ್ಲಿ ನೌಕರರ ವೇತನ ಪಾವತಿಸಲು ಸರಕಾರವೇ ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ಅಧಿಕಾರಿಗಳು ಈ ಹಣವನ್ನು ವೇತನ ಪಾವತಿಸಲು ಬಳಸದೇ ಕಾಮಗಾರಿಗಳಿಗೆ ಬಳಸುತ್ತಿದ್ದಾರೆಂದ ಅವರು, ಜಿಲ್ಲಾದ್ಯಂತ ನೌಕರರಿಗೆ ಕಳೆದ ಹಲವಾರು ತಿಂಗಳುಗಳಿಂದ ವೇತನ ನೀಡದೇ ಸತಾಯಿಸಲಾಗುತ್ತಿದ್ದು, ಈ ಸಂಬಂಧ ಪಿಡಿಒಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕಾಗಿದ್ದ ಜಿಪಂ ಸಿಇಒ ಸಭೆ ನಡೆಸದೇ ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿದರು.

ಈ ವೇಳೆ ಧರಣಿನಿರತರ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದ ಡಿಎಸ್, ಧರಣಿ ನಿರತರ ಸಮಸ್ಯೆ ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮನವೊಲಿಸಲು ಮುಂದಾದರು. ಆದರೆ ಧರಣಿನಿರತ ಮುಖಂಡರು ಜಿಪಂ ಸಿಇಒ ಧರಣಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಧರಣಿಯಲ್ಲಿ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಸಿಇಒ ತುರ್ತು ಕೆಲಸದ ನಿಮಿತ್ತ ಬೇರೆಡೆ ತೆರಳಿರುವ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಿದರೂ ಧರಣಿನಿರತರು ಪಟ್ಟು ಸಡಿಲಿಸಲಿಲ್ಲ. ಈ ವೇಳೆ ಎರಡು ದಿನಗಳ ಒಳಗೆ ಸಿಇಒ ಅವರೊಂದಿಗೆ ಸಭೆ ನಡೆಸುವ ನಿಟ್ಟಿನಲ್ಲಿ ದಿನಾಂಕ ಗೊತ್ತು ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಒಪ್ಪಿದ ಮುಖಂಡರು, ಷರತ್ತು ವಿಧಿಸಿ, ಅಧಿಕಾರಿಗಳು ಒಪ್ಪಿಗೆ ನೀಡಿದ್ದರಿಂದ ಧರಣಿಯನ್ನು ಕೈಬಿಡಲಾಯಿತು.

ಧರಣಿಯಲ್ಲಿ ಸಂಘದ ಜಿಲ್ಲಾ ಮುಖಂಡ ಕಳವಳ್ಳಿ ಕಳಸಪ್ಪ, ವಿವಿಧ ತಾಲೂಕುಗಳ ತಾಲೂಕು ಗ್ರಾಪಂ ನೌಕರರ ಸಂಘದ ಉಮೇಶ್, ಸರ್ಪುದ್ದೀನ್, ಮೋಹನ್‌ರಾಜ್, ಮಲ್ಲೇಶಪ್ಪ, ರಾಜು, ಪ್ರದೀಪ್, ಮಂಜು, ಮಲ್ಲೇಶಪ್ಪ, ಮಂಜಪ್ಪ ಸೇರಿದಂತೆ 7 ತಾಲೂಕುಗಳ ನೂರಾರು ಗ್ರಾಪಂ ನೌಕರರು ಭಾಗವಹಿಸಿದ್ದರು.

‘ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’

ಗ್ರಾಪಂ ನೌಕರರಿಗೆ ಸರಕಾರ ವೇತನ ಪಾವತಿಸಲು ಆದೇಶ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರಕಾರ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಗ್ರಾಪಂ ನೌಕರರನ್ನು ಜೀತದಾಳುಗಳಂತೆ ಸಮಯದ ಮಿತಿ ಇಲ್ಲದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ. ಗ್ರಾಮಗಳ ಸ್ವಚ್ಛತೆ ಕಾಪಾಡುತ್ತಾ ಅನಾರೋಗ್ಯಕ್ಕೆ ತುತ್ತಾದರೂ ಕೇಳೋರಿಲ್ಲ. ಅಧಿಕಾರಿಗಳು ನೌಕರರ ಯಾವ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂಬುದು ಗ್ರಾಪಂ ಗುತ್ತಿಗೆ ನೌಕರ ಅಳಲಾಗಿದೆ.

ನಾನು ಕಡೂರಳ್ಳಿ ಗ್ರಾಪಂನಲ್ಲಿ ನೀರುಗುಂಟಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಕಳೆದ 20 ತಿಂಗಳಿನಿಂದ ವೇತನ ಪಾವತಿಸಿಲ್ಲ, ಆದರೆ ನೀರು ಬಿಡಿ, ಕಸ ತೆಗೆಯಿರಿ, ಚರಂಡಿ ಸ್ವಚ್ಛ ಮಾಡಿ ಎಂದು ಅಧಿಕಾರಿಗಳು ಹೇಳುತ್ತಾರೆ. ಸಂಬಂಧವಿಲ್ಲದೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ವಿಚಾರಿಸಿದರೆ ಕೆಲಸ ಬಿಟ್ಟು ಹೋಗಿ, ಇಒ, ಸಿಇಒ ಕೇಳಿ ಎನ್ನುತ್ತಾ ಕಿರುಕುಳ ನೀಡುತ್ತಿದ್ದಾರೆ.

ಮಂಜುಳಾ, ಕಡೂರಳ್ಳಿ ಗ್ರಾಪಂ ಸಿಬ್ಬಂದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News