ಹುಟ್ಟೂರು ಕೆಂಕೆರೆ ತೋಟದಲ್ಲಿ ಬಕಾಲ ಕವಿ ಕೆ.ಬಿ.ಸಿದ್ದಯ್ಯ ಅಂತ್ಯ ಸಂಸ್ಕಾರ

Update: 2019-10-18 12:58 GMT

ಬೆಂಗಳೂರು, ಅ. 18: ಹಿರಿಯ ಸಾಹಿತಿ, ದಲಿತ ಚಿಂತಕ, ಹೋರಾಟಗಾರ ಹಾಗೂ ಕವಿ ಕೆ.ಬಿ.ಸಿದ್ದಯ್ಯ(65) ಶುಕ್ರವಾರ ಬೆಳಗಿನಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಹುಟ್ಟೂರು ಕೆಂಕೆರೆ ಗ್ರಾಮದ ಅವರ ತೋಟದಲ್ಲಿ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಕೆಂಕೆರೆ ಮೂಲದ ಕೆ.ಬಿ. ಸಿದ್ದಯ್ಯ ಅವರು ಪತ್ನಿ ವಿಶ್ರಾಂತ ಶಿಕ್ಷಕಿ ಗಂಗರಾಜಮ್ಮ, ಪುತ್ರಿಯರಾದ ಪಲ್ಲವಿ, ಚೈತ್ರ ಹಾಗೂ ಪುತ್ರ ಅನಿಕೇತನ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿಸಿದ್ದಾರೆ.

1954ರ ಮಾರ್ಚ್ 2ರಂದು ತಂದೆ ಬೈಲಪ್ಪ, ತಾಯಿ ಅಂತೂರಮ್ಮ ದಂಪತಿ ಪುತ್ರನಾಗಿ ಜನಿಸಿದ್ದ ಕೆ.ಬಿ.ಸಿದ್ದಯ್ಯ ಅವರು, ಬಕಾಲ ಕವಿಯೆಂದು ಹೆಸರಾಗಿದ್ದರು. ಅವರು ತಮ್ಮ ನೇರ ನಡೆ, ನುಡಿಯಿಂದ ಚರ್ಚೆಗೆ ಗ್ರಾಸವಾಗುತ್ತಿದ್ದರು. ತಮ್ಮ ವಿಶಿಷ್ಟ ಬರಹಗಳಿಂದಲೇ ಸಾಹಿತ್ಯ ವಲಯದಲ್ಲಿ ಹೆಚ್ಚು ಗಮನ ಸೆಳೆದಿದ್ದರು.

ದಲಿತ, ಬಂಡಾಯದ ಸಾಹಿತ್ಯದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಸಿದ್ದಯ್ಯ, ಸಾಹಿತ್ಯ ವಿಮರ್ಶೆಯಲ್ಲೂ ಹೆಸರು ಮಾಡಿದ್ದರು. ‘ದಕ್ಲ ಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನಿ’ ಎಂಬ ಖಂಡಕಾವ್ಯಗಳನ್ನು ರಚಿಸಿರುವ ಇರುವ, ನಾಲ್ಕು ಶ್ರೇಷ್ಠ ಸತ್ಯಗಳು ಎನ್ನುವ ಕೃತಿಯನ್ನು ಸಂಪಾದಿಸಿದ್ದರು ಎಂದು ಗೊತ್ತಾಗಿದೆ.

ಮೈಸೂರು ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದ ಬಳಿಕ ಕೆ.ಬಿ.ಸಿದ್ದಯ್ಯ ಅವರು ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಆಂಗ್ಲ ಉಪನ್ಯಾಸಕರಾಗಿ ಕಾರ್ಯಾರಂಭಿಸಿ, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ತುಮಕೂರು ರೈಲು ನಿಲ್ದಾಣ ಸಮೀಪದ ಉಪ್ಪಾರಹಳ್ಳಿಯಲ್ಲಿ ನೆಲೆಸಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಪ್ರೊ.ಯು.ಆರ್.ಅನಂತಮೂರ್ತಿ ಅವರ ಶಿಷ್ಯರಾಗಿದ್ದ ಸಿದ್ದಯ್ಯ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಗೌತಮ ಬುದ್ಧ, ಅಲ್ಲಮಪ್ರಭು ಕುರಿತು ಗಂಭೀರ ಅಧ್ಯಯನ ನಡೆಸಿದ್ದರು. ಪರಿಶಿಷ್ಟರ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು.

ಸಿದ್ದಯ್ಯ ಅವರಿಗೆ 2013ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ, 2004ರಲ್ಲೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಸಾಹಿತ್ಯ ವಲಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಸಿದ್ದಯ್ಯ, ದಲಿತ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.

ಮೂರು ವರ್ಷದ ಹಿಂದೆ ಅವರಿಗೆ ಲಘು ಹೃದಯಾಘಾತವಾಗಿ ಚಿಕಿತ್ಸೆ ಪಡೆದಿದ್ದರು. ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು, ಸಿದ್ದಯ್ಯ ತಮ್ಮ ಮನೆಗೆ ಕರೆಸಿ ಅವರಿಗೆ ವಿಶೇಷ ಆತಿಥ್ಯ ನೀಡಿದ್ದು, ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಪೇಜಾವರ ಶ್ರೀಗಳಿಗೆ ತುಮಕೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಲು ಮುಂದಾಗಿದ್ದಾಗ ಜಿಲ್ಲೆಯ ಪ್ರಗತಿಪರರು ವಿರೋಧಿಸಿದ ಸಂದರ್ಭದಲ್ಲಿ ವಿವಿಯ ನಿರ್ಧಾರವನ್ನು ಕೆ.ಬಿ.ಸಿದ್ದಯ್ಯ ಬೆಂಬಲಿಸುವ ಮೂಲಕ ವಿರೋಧಕ್ಕೆ ಗುರಿಯಾಗಿದ್ದರು.

ಕೆಲ ದಿನಗಳ ಹಿಂದೆಯೆಷ್ಟೇ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿದ್ದಯ್ಯ ಅವರನ್ನು ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗಿನಜಾವ 4:15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಮೃತದೇಹವನ್ನು ತುಮಕೂರಿನ ಉಪ್ಪಾರಹಳ್ಳಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಅವರ ಮನೆ ಹಾಗೂ ತುಮಕೂರು ಪುರಭವನದ ಮುಂಭಾಗ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಈ ವೇಳೆ ಅವರ ಆಪ್ತರು ಸಿದ್ದಯ್ಯನವರ ಅಂತಿಮ ದರ್ಶನ ಪಡೆದರು. ಆ ಬಳಿಕ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆಯ ಅವರ ತೋಟದಲ್ಲಿ ಕೆ.ಬಿ. ಸಿದ್ದಯ್ಯನವರನ್ನು ಮಣ್ಣು ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ಸದಾ ಚೈತನ್ಯದ ಚಿಲುಮೆಯಂತಿದ್ದ, ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದ, ನನ್ನ ಬಹುಕಾಲದ ಗೆಳೆಯ, ಸೈದ್ಧಾಂತಿಕ ಸಂಗಾತಿ, ಕವಿ ಕೆ.ಬಿ.ಸಿದ್ದಯ್ಯನವರ ಸಾವು ನನಗೆ ಆಘಾತವನ್ನುಂಟು ಮಾಡಿದೆ. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News