ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ: ಎಚ್.ಡಿ.ದೇವೇಗೌಡ

Update: 2019-10-18 14:28 GMT

ಬೆಂಗಳೂರು, ಅ.18: ಜೆಡಿಎಸ್ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ. ಈ ಹಿಂದೆ ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಎದುರಾಗಿದ್ದ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವವರ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಶುಕ್ರವಾರ ನಗರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರ ನಡುವೆ ಹೊಂದಾಣಿಕೆ ಇಲ್ಲ ಅನ್ನೋ ಭಾವನೆಯಿದೆ. ಅವರೆಲ್ಲರೂ ಗೌರವಾನ್ವಿತ ಸದಸ್ಯರು. ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ ಎಂದರು. ವಿಧಾನಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಜೆಡಿಎಸ್ ಪಕ್ಷ ಬಿಡುವುದಿಲ್ಲ. ಇವತ್ತು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ. ಪಕ್ಷದ ಸಂಘಟನೆಗೆ ಅವರ ಸಹಕಾರವು ಸದಾಕಾಲ ನಮ್ಮ ಜೊತೆ ಇರುತ್ತದೆ ಎಂದು ದೇವೇಗೌಡ ಹೇಳಿದರು.

ನಮ್ಮ ಪಕ್ಷದ 33 ಮಂದಿ ವಿಧಾನಸಭಾ ಸದಸ್ಯರು ಹಾಗೂ 15 ಮಂದಿ ವಿಧಾನಪರಿಷತ್ತಿನ ಸದಸ್ಯರನ್ನು ಒಳಗೊಂಡಂತೆ ಇಂದು ಸಭೆ ಕರೆಯಲಾಗಿದೆ. ನವೆಂಬರ್ 1 ಅಥವಾ 2ರಂದು ಮತ್ತೊಂದು ಸಭೆ ಕರೆಯಲಾಗುವುದು. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ಇಲ್ಲದೆ, ಎಲ್ಲರೂ ಒಂದಾಗಿ ಪ್ರಾದೇಶಿಕ ಪಕ್ಷವನ್ನು ಉಳಿಸಲು ಶಕ್ತಿ ಮೀರಿ ಹೋರಾಟ ಮಾಡುತ್ತೇವೆ ಎಂದು ದೇವೇಗೌಡ ತಿಳಿಸಿದರು.

ನವೆಂಬರ್ ಮೊದಲ ವಾರದಲ್ಲಿ ಐದು ಅಥವಾ ಆರು ತಂಡಗಳನ್ನು ರಚನೆ ಮಾಡಿಕೊಂಡು, ನಾನು ಸೇರಿದಂತೆ ಎಲ್ಲ ಪ್ರಮುಖ ಮುಖಂಡರು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಅ.23ರಂದು ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಏನೇ ತೀರ್ಪು ಬಂದರೂ ನಾವು ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ರಾಜೀನಾಮೆ ನೀಡಿದ ಬಳಿಕ ನಾನು ಸಹ ರಾಜೀನಾಮೆ ನೀಡುತ್ತಿದ್ದೇನೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದರು.

ಎಚ್.ಡಿ.ದೇವೇಗೌಡರ ಒಡನಾಡಿಯಾಗಿಯೇ ಇರುತ್ತೇನೆ. ಅಧಿಕಾರದ ಆಮಿಷಕ್ಕೆ ಒಳಗಾಗುವುದಿಲ್ಲ. ರಾಜೀನಾಮೆ ನೀಡಿ ಅನ್ಯ ಪಕ್ಷಕ್ಕೆ ಸೇರ್ಪಡೆಯಾಗುವ ಅಗತ್ಯವು ನನಗಿಲ್ಲ ಎಂದು ಅವರು ಹೇಳಿದರು.

ನನ್ನ ಜೀವನದಲ್ಲಿ ಯಾರಿಗೂ ಭಯ ಬಿದ್ದಿಲ್ಲ. ಐಟಿ, ಈ.ಡಿ. ಯಾವ ತನಿಖಾ ಸಂಸ್ಥೆ ಬಗ್ಗೆಯೂ ನನಗೆ ಭಯವಿಲ್ಲ. ಈ ಹಿಂದೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ನನ್ನ ಮೇಲೆ ಐಟಿ ದಾಳಿಯಾಗಿತ್ತು. ನಾನು ಎಲ್ಲ ದಾಖಲೆಗಳನ್ನು ಸಮಪರ್ಕವಾಗಿಟ್ಟಿದ್ದೇನೆ. ನಾನು ತೆಗೆದುಕೊಳ್ಳುವ ವೇತನಕ್ಕೂ ತೆರಿಗೆ ಪಾವತಿಸುತ್ತೇನೆ ಎಂದು ಕುಪೇಂದ್ರ ರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News