ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನರೆಡ್ಡಿ ವಿಚಾರಣೆಗೆ ಹೈಕೋರ್ಟ್ ಅನುಮತಿ

Update: 2019-10-18 16:19 GMT

ಬೆಂಗಳೂರು, ಅ.18: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 409ರ ಅಡಿ ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಹೈಕೋರ್ಟ್ ಅನುಮತಿ ನೀಡಿದೆ. 

ಐಪಿಸಿ ಸೆಕ್ಷನ್ 409 ಕ್ರಿಮಿನಲ್ ವಿಶ್ವಾಸದ್ರೋಹ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಇದರ ಅಡಿಯಲ್ಲಿ ವಿಚಾರಣೆ ನಡೆದು ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿದೆ. ಈ ಸೆಕ್ಷನ್ ಅಡಿ ಜನಾರ್ದನರೆಡ್ಡಿ ಅವರ ವಿಚಾರಣೆ ನಡೆಸುವಂತೆ ಸಿಬಿಐ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹೀಗಾಗಿ, ವಿಚಾರಣೆ ಬಳಿಕ ಇತರೆ ಸೆಕ್ಷನ್‌ಗಳಲ್ಲದೆ ಸೆಕ್ಷನ್ 409ರ ಅಡಿ ಜನಾರ್ದನರೆಡ್ಡಿ ಅವರು ತಪ್ಪಿತಸ್ಥರು ಎಂದು ಸಾಬೀತಾದರೆ ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಶುಕ್ರವಾರ ಆದೇಶ ಪ್ರಕಟಿಸಿದ ನ್ಯಾ.ಬಿ.ಎ.ಪಾಟೀಲ್ ಅವರ ಏಕಸದಸ್ಯ ನ್ಯಾಯಪೀಠ, ಸೆಕ್ಷನ್ 409 ಅನ್ನು ವಿಚಾರಣೆ ವೇಳೆ ಪರಿಗಣಿಸುವಂತೆ ಸೂಚಿಸಿತು. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, 2013ರಲ್ಲಿ ಸಲ್ಲಿಸಿದ್ದ ಅರೋಪ ಪಟ್ಟಿಯಲ್ಲಿ ಐಪಿಸಿ ಸೆಕ್ಷನ್ 409 ಅಡಿ ಕೂಡ ಆರೋಪ ದಾಖಲಿಸಿತ್ತು. ಅದರಿಂದ ತಮಗೆ ವಿನಾಯಿತಿ ನೀಡಬೇಕೆಂದು ಜನಾರ್ದನರೆಡ್ಡಿ ಸಲ್ಲಿಸಿದ್ದ ಅರ್ಜಿಯನು ವಿಶೇಷ ನ್ಯಾಯಾಲಯವು 2018ರ ಸೆ.18ರಂದು ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ಶುರುವಾಗಿ ಸಾಕ್ಷಿಗಳ ವಿಚಾರಣೆ ಕೂಡ ನಡೆಯುತ್ತಿರುವ ಹಂತದಲ್ಲಿ ಆರೋಪಗಳಲ್ಲಿ ಬದಲಾವಣೆ ಮಾಡಲು ಅಥವಾ ಸೇರಿಸಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಹೀಗಾಗಿ, ಈ ತೀರ್ಪು ಕಾನೂನುಬಾಹಿರ ಎಂದು ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ವಾದಿಸಿದ್ದರು. ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಆರಂಭವಾಗಲಿದ್ದು, ಜನಾರ್ದನರೆಡಿ ಅವರ ವಿರುದ್ಧದ ಈ ಆರೋಪ ಸಾಬೀತಾಗದೆ ಇದ್ದರೆ ಮಾತ್ರ ಅವರಿಗೆ ಕೊಂಚ ನಿರಾಳತೆ ಸಿಗಲಿದೆ. ಉಳಿದ ಸೆಕ್ಷನ್‌ಗಳ ಅಡಿ ದಾಖಲಾದ ಆರೋಪಗಳಿಂದ ಗಂಭೀರ ಶಿಕ್ಷೆ ವಿಧಿಸಲಾಗುವುದಿಲ್ಲ. ಒಂದು ವೇಳೆ ಈ ಸೆಕ್ಷನ್ ಅಡಿ ಅವರ ಮೇಲಿನ ಆರೋಪ ಸಾಬೀತಾದರೆ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News