ವಿಜಯಪುರದ ಆಸ್ಪತ್ರೆ ಹೊರಗೆ ಹೆರಿಗೆ ಪ್ರಕರಣ: ಜನಪ್ರತಿನಿಧಿಗಳು ತಲೆ ತಗ್ಗಿಸುವ ಸಂಗತಿ- ಕುಮಾರಸ್ವಾಮಿ

Update: 2019-10-18 16:26 GMT

ಮೈಸೂರು,ಅ.18: ವಿಜಯಪುರದ ಆಸ್ಪತ್ರೆ ಹೊರಭಾಗದಲ್ಲಿ ಗರ್ಭಿಣಿ ಹೆರಿಗೆ ಪ್ರಕರಣ ಜನಪ್ರತಿನಿಧಿಗಳು ತಲೆ ತಗ್ಗಿಸುವ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಆಸ್ಪತ್ರೆ ಹೊರಗೆ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲಾಗಿದೆ. ಇದು ಕೇವಲ ಸರಕಾರ ಮಾತ್ರವಲ್ಲ, ಎಲ್ಲಾ ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಆರೋಗ್ಯ ಇಲಾಖೆ ಕಟ್ಟಡ ಕಟ್ಟಲು ಕೊಡುವ ಆಸಕ್ತಿಯನ್ನು ಆಸ್ಪತ್ರೆ ಸಿಬ್ಬಂದಿ ನೇಮಕಾತಿ ಮತ್ತು ನಿರ್ವಹಣೆಗೂ ಹೆಚ್ಚು ಗಮನ ನೀಡಬೇಕು, ಇದರಿಂದಾಗಿಯೇ ವ್ಯವಸ್ಥೆ ಹೆದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಆರೋಗ್ಯ ಸಚಿವರು ಈಗಲಾದರು ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆಗೆ ಚುರುಕು ಮುಟ್ಟಿಸಿ ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನು ಸರಿಪಡಿಸಲಿ ಎಂದು ಹೇಳಿದರು.

ಮಹದಾಯಿ ಹೋರಾಟಗಾರರು ಬೀದಿಯಲ್ಲಿ ಮಲಗಿದ್ದು ಅವರಿಗೆ ಸಹಾಯ ಮಾಡಲು ನಾವು ಸಿದ್ದ ಎಂದ ಕುಮಾರಸ್ವಾಮಿ, ಯಡಿಯೂರಪ್ಪ ನಿನ್ನೆ ಮಹಾರಾಷ್ಟ್ರದಲ್ಲಿ ಚುನಾವನಾ ಪ್ರಚಾರದ ವೇಳೆ ಕರ್ನಾಟಕದಿಂದು ನೀರು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಾವು ಬರಲಾಗದಲ್ಲಿ ಇದ್ದಾಗ ಮಹಾರಾಷ್ಟ್ರದವರು ನಮಗೆ ನೀರು ಕೊಟ್ಟರೆ? ರಾಜಕೀಯಕ್ಕಾಗಿ ರಾಜ್ಯದ ಹಿತ ಬಲಿ ಕೊಡುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅನರ್ಹ ಶಾಸಕ ಎಚ್.ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ಆಣೆ ಪ್ರಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಬಗ್ಗೆ ಮಾತನಾಡದೇ ಇರೋದು ಒಳ್ಳೆಯದು ಎಂದು ಸಾ.ರಾ.ಮಹೇಶ್‍ಗೆ ಹೇಳಿದ್ದೇನೆ. ಆ ವ್ಯಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಆಣೆ ಪ್ರಮಾಣ ಏತಕ್ಕಾಗಿ ಬೇಕು? ದುಡ್ಡು ಕೊಟ್ಟವರು ಬರ್ತಾರಾ, ಬರೋಕೆ ಸಾಧ್ಯವಾ? ದೇಶದಲ್ಲಿ ತ್ಯಾಗ ಮಾಡಿ ಜನಪರ ಸರಕಾರ ಮಾಡುವುದಕ್ಕೆ ಇವರು ಹೋಗಿದ್ದಾರಾ? ಆ ವ್ಯಕ್ತಿ ಮುಖವಾಡಕ್ಕೆ ಮುಂದಿನ ದಿನಗಳಲ್ಲಿ ಜನರೇ ತೀರ್ಮಾನ ಮಾಡಲಿದ್ದಾರೆ. ಹೀಗಾಗಿ ಆ ವ್ಯಕ್ತಿಯ ಬಗ್ಗೆ ಚರ್ಚೆ ಅನಗತ್ಯವೆಂದು ಹೇಳಿದರು.

ಹುಣಸೂರು ಬೈ ಎಲೆಕ್ಷನ್‍ಗೆ ಪಕ್ಷದಿಂದ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ಸೋಲು ಗೆಲುವು ಎರಡನ್ನೂ ಸ್ವೀಕಾರ ಮಾಡಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವಂತಹ ಶಕ್ತಿ ಕಾರ್ಯಕರ್ತರಲ್ಲಿ ಇದೆ. ಜನರು ಆ ತೀರ್ಮಾನಕ್ಕೆ ಬರುವ ಅಭಿಪ್ರಾಯ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News