ಅಣೆ-ಪ್ರಮಾಣದ ರಾಜಕೀಯ ಹೈಡ್ರಾಮಾ ಬಳಿಕ ಚಾಮುಂಡಿ ಬೆಟ್ಟದಲ್ಲಿ ಕ್ಷಮೆ ಕೇಳಿದ ಸಾ.ರಾ.ಮಹೇಶ್

Update: 2019-10-18 16:55 GMT

ಮೈಸೂರು,ಅ.18: ಆಣೆ-ಪ್ರಮಾಣದ ರಾಜಕೀಯ ಹೈಡ್ರಾಮಾದ ಬಳಿಕ ಮಾಜಿ ಸಚಿವ ಸಾರಾ ಮಹೇಶ್ ಇಂದು ಏಕಾಂಗಿಯಾಗಿ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಚಾಮುಂಡೇಶ್ವರಿ ದೇವಿ ಬಳಿ ಕ್ಷಮೆ ಕೋರಿದ್ದಾರೆ.

ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ವಿಶೇಷ ಪೂಜೆ ಸಲ್ಲಿಸಿದರು. ಕೆಲಕಾಲ ಸನ್ನಿಧಿಯಲ್ಲಿ ಧ್ಯಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿಯ ಕ್ಷಮೆ ಕೇಳಲು ಬಂದೆ. ನಮ್ಮ ವೈಯುಕ್ತಿಕ ವಿಚಾರಕ್ಕೆ ತಾಯಿಯನ್ನು ಸಾಕ್ಷಿ ಮಾಡಿಬಿಟ್ಟೆವು. ಇದರಿಂದ ನೋವಾಗಿದೆ. ಹೀಗಾಗಿ ಇಂದು ಅಮ್ಮನ ಕ್ಷಮೆ ಕೇಳಲು ಮತ್ತೆ ಬಂದೆ ಎಂದು ಹೇಳಿದರು.

ಮಾಧ್ಯಮಗಳ ಮೂಲಕ ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆ. ಆತ್ಮಸಾಕ್ಷಿಗಿಂತ ದೊಡ್ಡದು ಯಾವುದೂ ಇಲ್ಲ. ಕೆಲವೊಂದು ಬಾರಿ ಎಷ್ಟೇ ದೊಡ್ಡವರಾದರೂ, ಅಧಿಕಾರದಲ್ಲಿದ್ದರೂ ಆತ್ಮ ಸಾಕ್ಷಿಯೇ ಮುಖ್ಯವಾಗುತ್ತದೆ. ಆತ್ಮಸಾಕ್ಷಿಗೆ ನೋವಾಗಿದ್ದಕ್ಕೆ ನಾನು ಬಂದೆ. ನಿನ್ನೆ ನಡೆದ ಸತ್ಯಾಸತ್ಯತೆಯನ್ನು ಅಮ್ಮನೇ ತೀರ್ಮಾನ ಮಾಡುತ್ತಾಳೆ ಎಂದರು.

ಎರಡು ತಿಂಗಳಿಂದ ನಡೆದ ಘಟನೆಯಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಅದಕ್ಕಾಗಿ ಚಾಮುಂಡಿ ತಾಯಿಯ ಕ್ಷಮೆ ಕೇಳಲು ಬಂದೆ ಎಂದು ಸಾ.ರಾ.ಮಹೇಶ್ ಹೇಳಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News