ಮೋದಿ, ಅಮಿತ್ ಶಾ ರಂತೆ ಯಡಿಯೂರಪ್ಪ ಮತ್ತು ನಾನು ಒಟ್ಟಾಗಿದ್ದೇವೆ: ನಳಿನ್‍ ಕುಮಾರ್ ಕಟೀಲ್

Update: 2019-10-18 17:32 GMT

ಮಂಡ್ಯ, ಅ.18: ದೇಶಕ್ಕಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರು ಒಂದಾಗಿದ್ದಾರೆ. ಅದೇ ರೀತಿ ನಾನು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಗ್ಗಟ್ಟಾಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲು ಹೇಳಿದ್ದಾರೆ.

ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ನಾನು ಒಟ್ಟಿಗಿದ್ದೇವೆ, ಮುಂದೆಯೂ ಇರುತ್ತೇವೆ ಎಂದು ನಳಿನ್ ಹೇಳಿದರು. 

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಕೊನೆವರೆಗೂ ಜೊತೆಗಿರಲು ಸಾಧ್ಯವೇ ಇಲ್ಲವೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅವರಿಬ್ಬರೂ ಪಕ್ಷ ಕಟ್ಟುವುದರಿಂದ ಹಿಡಿದು ಕೊನೆವರೆಗೂ ಒಂದಾಗಿಯೇ ಇರಲಿಲ್ಲವೆ ಎಂದು ಅವರು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರ ಏಳಿಗೆ ಸಹಿಸದೆ ಕೆಲವರು ಆರ್ಥಿಕ ಕುಸಿತ ಉಂಟಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ದೇಶದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಜಿಎಸ್‍ಟಿ ಮೂಲಕ ಉತ್ತಮವಾಗಿ ತೆರಿಗೆ ಸಂಗ್ರಹವಾಗುತ್ತಿದೆ. ಅದರ ಬಗ್ಗೆ ಆತಂಕಬೇಡ ಎಂದು ಅವರು ಹೇಳಿದರು.

ಜ್ಞಾನಿ ಎಂದು ಹೇಳಿಕೊಂಡಿಲ್ಲ:

ಸಾವರ್ಕರ್ ಗೆ ಭಾರತರತ್ನ ನೀಡುವ ಸಂಬಂಧ ಸಿದ್ದರಾಮಯ್ಯ ಹೇಳಿಕೆಗೆ ಸಭೆಯ ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಕಟೀಲ್, ಸಿದ್ದರಾಮಯ್ಯ ಅವರು ಪಂಡಿತರು, ಜ್ಞಾನಿಗಳು. ರಾವಣನೂ ಪಂಡಿತನಾಗಿದ್ದ. ಆದರೆ, ಎಲ್ಲೂ ಜ್ಞಾನಿ ಎಂದು ಹೇಳಿಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.

32 ಜಿಲ್ಲೆಗಳ ಹೇಳಿಕೆ ವಿಚಾರಕ್ಕೆ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನೆರೆ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರವು 13 ರಾಜ್ಯಗಳಲ್ಲಿ ಅತಿ ಹೆಚ್ಚು ಕೊಟ್ಟಿರುವುದು ಕರ್ನಾಟಕಕ್ಕೆ. ಮತ್ತಷ್ಟು ಪರಿಹಾರ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಎಚ್.ಹೊನ್ನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಡಾ.ಸಿದ್ದರಾಮಯ್ಯ, ಮೈ.ವಿ.ರವಿಶಂಕರ್,  ಮುನಿರಾಜು, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News