ಅಮಾಯಕರ ಮೇಲೆ ಮಳವಳ್ಳಿ ಸಿಪಿಐ ಹಲ್ಲೆ ಆರೋಪ: ಕಾನೂನು ಕ್ರಮಕ್ಕೆ ಪ್ರಾಂತ ರೈತ ಸಂಘ ಒತ್ತಾಯ

Update: 2019-10-18 17:46 GMT

ಮಂಡ್ಯ, ಅ.18: ಮಳವಳ್ಳಿ ಸರ್ಕಲ್ ಇನ್ಸ್‍ಪೆಕ್ಟರ್ ಸಿ.ಎನ್.ರಮೇಶ್ ಅವರು ಗೂಂಡಾ ವರ್ತನೆ ತೋರುವ ಮೂಲಕ ಮೂವರು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ಎಲ್.ಭರತ್‍ ರಾಜ್ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.16ರ ತಡರಾತ್ರಿ ಯಾವುದೇ ಕಾರಣವಿಲ್ಲದೆ ಪಟ್ಟಣದ ನಿವಾಸಿಗಳಾದ ಸಿದ್ದಪ್ಪಾಜಿ ಆಲಿಯಾಸ್ ಮಯೂರ, ಸಿದ್ದಯ್ಯ ಹಾಗು ಎಂ.ಬಿ.ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ದೂರಿದರು.

ಮೂಳೆ ಮುರಿದಿರುವ ಸಿದ್ದಪ್ಪಾಜಿ ಅವರಿಗೆ ಚಿಕಿತ್ಸೆ ಕೊಡಿಸಿಕೊಂಡು ತಮಿಳುನಾಡಿನಿಂದ ತಡರಾತ್ರಿ ಪಟ್ಟಣಕ್ಕೆ ಆಗಮಿಸಿ ತಮ್ಮ ಮನೆ ಮುಂದೆ ಕಾರಿನಲ್ಲಿ ಇಳಿಯುವಾಗ ಏಕಾಏಕಿ ಇನ್ಸ್‍ಪೆಕ್ಟರ್ ಸಿ.ಎನ್.ರಮೇಶ್  ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದರು.

ಶಿವಕುಮಾರ್ ಅವರಿಗೆ ಬೂಟು ಕಾಲಿನಿಂದ ಒದ್ದ ಪರಿಣಾಮ ಸೊಂಟಕ್ಕೆ ಗಂಭೀರ ಗಾಯವಾಗಿದೆ. ಅಲ್ಲದೆ, ಇನ್ಸ್‍ಪೆಕ್ಟ್ ರಮೇಶ್, ಇವರ ವಿರುದ್ಧವೇ ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದರು.

ವಿನಾಕಾರಣ ಸಾರ್ವಜನಿಕರಿಗೆ ಮತ್ತು ತಮ್ಮ ಠಾಣೆ ಸಿಬ್ಬಂದಿಗೂ ರಮೇಶ್ ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆದಿವೆ. ಕೂಡಲೇ ಎಸ್ಪಿ ಅವರು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಹಲ್ಲೆಯಿಂದ ಗಾಯಗೊಂಡಿರುವ ಎಂ.ಬಿ.ಶಿವಕುಮಾರ್, ಸಿದ್ದಪ್ಪಾಜಿ ಹಾಗೂ ಸಿದ್ದಯ್ಯ ಅವರು ಸಿಪಿಐ ರಮೇಶ್ ಅವರಿಂದ ತಮಗಾದ ಕಿರುಕುಳವನ್ನು ವಿವರಿಸಿದರು. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿ ಹಾಗು ಮುಖಂಡ ಚಿಕ್ಕಮೊಗಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News