ಆರೆಸ್ಸೆಸ್ ನವರೇನು ಸೆಗಣಿ ಎತ್ತಿ ಬೆರಣಿ ತಟ್ಟಿದ್ರಾ..?: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-10-19 14:43 GMT

ಮೈಸೂರು,ಅ.19: ಬಿಜೆಪಿಯವರು ಕೋಮುವಾದ, ಜಾತಿ, ಧರ್ಮ, ಭಾವನಾತ್ಮಕ ವಿಚಾರದಲ್ಲಿ ಮತ್ತು ಅಲ್ಪಸಂಖ್ಯಾತರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಯುವಜನರ ಮನಸ್ಸಿನಲ್ಲಿ ಹುಳಿ ಹಿಂಡಿ ಕಳೆದ ಚುನಾವಣೆಯಲ್ಲಿ ಗೆಲವು ಸಾಧಿಸಿದರು ಎಂದು ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷದ ನಾಯಕರಾದ ಮೇಲೆ ಇದೇ ಪ್ರಥಮ ಬಾರಿಗೆ ಶನಿವಾರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ನಗರ ಮತ್ತು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಅದ್ದೂರಿ ಸ್ವಾಗತ ನೀಡಿ ಅಭಿನಂದಿಸಲಾಯಿತು.

ನಂತರ ಮಾತನಾಡಿದ ಸಿದ್ದರಾಮಯ್ಯ, ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದು ನಮ್ಮ ಸರಕಾರದ ಆಡಳಿತ ವೈಫಲ್ಯದಿಂದಲ್ಲ, ಬಿಜೆಪಿಯವರ ಅಪಪ್ರಚಾರ ಮತ್ತು ಸುಳ್ಳಿನಿಂದ. ಬಿಜೆಪಿಯವರು ಒಂದೇ ಸುಳ್ಳನ್ನು ಪದೇ ಪದೇ ಹೇಳಿ ಜನರಿಗೆ ಭಾವನಾತ್ಮಕ ವಿಷಯಗಳನ್ನು ತುಂಬಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಮೋದಿ ಮೋದಿ ಎನ್ನುತ್ತಿದ್ದ ಯುವ ಜನತೆಗೆ ಈಗ ದೇಶ ಸ್ಥಿತಿ ಏನಾಗಿದೆ ಎಂದು ಅರ್ಥವಾಗುತ್ತಿದೆ. ಆದರೂ ನೆಪ ಮಾತ್ರಕ್ಕೆ ಮೋದಿ ಮೋದಿ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಸುಳ್ಳುಗಳನ್ನು ಹೇಳಿ ಚುನಾವಣೆ ಗೆದ್ದರು. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ನಾವು ಮಾಡಿರುವ ಕೆಲಸಗಳ ಸತ್ಯವನ್ನು ಹೇಳದೆ ಸೋಲಬೇಕಾಯಿತು. ಸಂಘಪರಿವಾರ ಮತ್ತು ಆರೆಸ್ಸೆಸ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಬರೀ ಸುಳ್ಳುಗಳನ್ನೇ ಜನರಿಗೆ ಹೇಳಿದರು. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಪರ, ಮುಂದುವರಿದ ಜಾತಿಗಳ ವಿರೋಧಿ ಹೀಗೆ ನಾನಾ ರೀತಿಯ ಸುಳ್ಳುಗಳನ್ನು ಹೇಳಿ ಜನರ ಮನಸ್ಸನ್ನು ಕೆಡಿಸಿದರು ಎಂದು ಹೇಳಿದರು.

ರಾಜ್ಯದಲ್ಲಿ ನಡೆದ ಹಲವು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಕೇವಲ ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮಂಡ್ಯದಲ್ಲಿ ಸುಮಲತಾ ದುಡ್ಡಿನಿಂದ ಗೆದ್ದಿಲ್ಲ. ಜನರ ತೀರ್ಪಿನ ಮುಂದೆ ದುಡ್ಡಿನ ಆಟ ನಡೆಯಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ತಿಳಿಸಿದರು.

ಮೋದಿ ಪ್ರಕಾರ ಆರ್ಥಿಕ ಸ್ಥಿತಿ 5ಕ್ಕೆ ಕುಸಿದಿದೆ. ಆದರೆ ವಾಸ್ತವವಾಗಿ 3.5ಕ್ಕೆ ಆರ್ಥಿಕ ಸ್ಥಿತಿ ಕುಸಿದಿದೆ. ದೇಶದ ಆರ್ಥಿಕತೆ ಇಷ್ಟು ಮಟ್ಟಕ್ಕೆ ಕುಸಿದಿರಲಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಸಿವು ಹೆಚ್ಚಾಗಿರುವ ದೇಶಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಆದರೂ ಸಮೃದ್ಧಿಯಾಗಿದೆ ಎಂದು ಹೇಳುತ್ತಾರೆ. ಹಸಿವು, ನಿರುದ್ಯೋಗ ಪ್ರಧಾನಿ ಮೋದಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಎಂದು ಕಿಡಿಕಾರಿದರು.

ಆರೆಸ್ಸೆಸ್ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋ ರಕ್ಷಣೆ ಹೆಸರಿನಲ್ಲಿ ಗುಂಪು ಹತ್ಯೆಗಳು ಹೆಚ್ಚಾಗುತ್ತಿದೆ. ವರ್ಷದಲ್ಲಿ ನಾವು ಎರಡು ಬಾರಿ ಗೋವುಗಳನ್ನ ಪೂಜೆ ಮಾಡುತ್ತೇವೆ. ತಳ ಸಮುದಾಯದವರು ಗೋವುಗಳನ್ನು ರಕ್ಷಣೆ ಮಾಡುತ್ತಾರೆ. ಆರೆಸ್ಸೆಸ್ ನವರೇನು ಸೆಗಣಿ ಎತ್ತಿ ಬೆರಣಿ ತಟ್ಟಿದ್ರಾ..? ಇವರೆಲ್ಲಾ ಗೋವು ರಕ್ಷಣೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಇದಕ್ಕೂ ಮೊದಲು ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ಹಳೆ ಆರ್.ಎಂ.ಸಿ ಬಳಿ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಯುರ್ವೇದ ಆಸ್ಪತ್ರೆ ಸರ್ಕಲ್, ಕೆ.ಆರ್.ಆಸ್ಪತ್ರೆ ರಸ್ತೆ, ರೈಲ್ವೆ ನಿಲ್ದಾಣಗಳ ಮೂಲಕ ಕಾಂಗ್ರೆಸ್ ಕಚೇರಿಗೆ ಕರೆದುಕೊಂಡು ಬರಲಾಯಿತು. ಇದೇ ವೇಳೆ ಹಲವು ಕಲಾತಂಡಗಳು ಭಾಗವಹಿಸಿದ್ದವು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಆಗಮಿಸಿ ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಕೂಗಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಸಂಸದ ಆರ್.ಧ್ರುವನಾರಾಯಣ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಆಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಎಚ್.ಪಿ.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಸುನೀಲ್ ಬೋಸ್, ಕೆಪಿಸಿಸಿ ಸದಸ್ಯರುಗಳಾದ ಎನ್.ಭಾಸ್ಕರ್, ಅಕ್ಬರ್ ಅಲೀಂ, ಹೆಡತಲೆ ಮಂಜುನಾಥ್, ನಾರಾಯಣಸ್ವಾಮಿ, ಎಚ್.ಪಿ.ಬಸವರಾಜು, ಮೈಸೂರು ಬಸವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಹಾತ್ಮಾ ಗಾಂಧಿ ಕೊಲೆಗೆ ಸಂಚು ರೂಪಿಸಿದ್ದ ಸಾವರ್ಕರ್ ಗೆ ಭಾರತ ರತ್ನ ಕೊಡುವುದು ಬೇಡ ಎಂದೆ. ಅದನ್ನೇ ಇತಿಹಾಸ ಗೊತ್ತಿಲ್ಲದ ಕೆಲವರು ದೊಡ್ಡದು ಮಾಡಿದರು. ಸಾವರ್ಕರ್ ಹಿಂದೂ ಎಂಬ ಪದವನ್ನು ಹುಟ್ಟುಹಾಕಿದವನು. ಮಹಾತ್ಮಾ ಗಾಂಧೀಜಿ ಕೊಂದ ಗೋಡ್ಸೆಗೆ ಸಂಚು ರೂಪಿಸಿಕೊಟ್ಟಿದ್ದ ಪ್ರಮುಖ ಆರೋಪಿ. ಈತನಿಗೆ ಭಾರತ ರತ್ನ ನೀಡುವ ಬದಲು ಕಾಯಕ ಯೋಗಿ, ಸಾವಿರಾರು ಮಕ್ಕಳ ಬಾಳಲ್ಲಿ ಬೆಳಕಾಗಿದ್ದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಹೇಳಿದ್ದೆ, ಅದನ್ನೆ ಕೆಲವರು ದೊಡ್ಡದು ಮಾಡಿದರು.

-ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News