ಐಟಿ ಮೂಲಕ ಸಿದ್ದರಾಮಯ್ಯರನ್ನು ಟಚ್ ಮಾಡಿದರೆ ರಾಜ್ಯದ ಜನತೆ ಸುಮ್ಮನಿರಲ್ಲ: ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಎಚ್ಚರಿಕೆ

Update: 2019-10-19 15:56 GMT

ಮೈಸೂರು,ಅ.19: ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮನೆ ಮೇಲೆ ಐಟಿ ದಾಳಿಯಾಗಿದೆ. ಅದೇ ರೀತಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಪ್ಲಾನ್ ರೂಪಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಟಚ್ ಮಾಡಿದರೆ ರಾಜ್ಯದ ಜನತೆ ಸುಮ್ಮನಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಂದ್ರ ಸರಕಾರಕ್ಕೆ ಎಚ್ಚರಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಏರ್ಪಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಮೇಲೆ ಐಟಿ ಅಸ್ತ್ರ ಬಳಸುತ್ತಾರೆ. ಹಾಗೆಯೇ ಸಿದ್ದರಾಮಯ್ಯರನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಗ್ಗೆಯೂ ಸಂಚು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದರೂ ಹಣ ನೀಡದೆ. ಚುನಾವಣೆ ದೃಷ್ಟಿಯಿಂದ ಇದೀಗ ಸ್ವಲ್ಪ ಹಣ ನೀಡಿದ್ದಾರೆ. ಐಟಿ ಅಸ್ತ್ರ ಬಳಸಿ ಎಲ್ಲಾ ವ್ಯವಸ್ಥೆಯನ್ನ ಬಿಜೆಪಿ ಬದಲಾವಣೆ ಮಾಡುತ್ತಿದೆ. ಇತ್ತೀಚೆಗೆ ನ್ಯಾಯಾಲಯದ ಮೇಲೂ ನಂಬಿಕೆ ಹೋಗಿದೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ಭಯದ ವಾತಾವರಣ ಸೃಷ್ಟಿಮಾಡಿದೆ. ಕಾಂಗ್ರೆಸ್ ನಾಯಕರನ್ನ ಕಟ್ಟಿ ಹಾಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಆದರೆ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಹುಣಸೂರು, ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ್ರೋಹಿಗಳಿಗೆ ಭಾರತ ರತ್ನ ನೀಡಲು ಮುಂದಾಗಿದ್ದಾರೆ. ಗಾಂಧಿ ಕೊಂದವರನ್ನ ದೇಶಪ್ರೇಮಿ ಅನ್ನುತ್ತಾರೆ ಎಂದು ಹರಿಹಾಯ್ದ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ನಿಮಗೆ ಅಧಿಕಾರ ನಡೆಸಲು ಆಗದಿದ್ದರೆ ನಮ್ಮವರನ್ನು ಬಿಡಿ, ಹಣ ತರ್ತೇವೆ. ಆಡಳಿತ ನಡೆಸುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷ ನಾಯಕರಾಗಿ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ. ಅವರೇ ಸೂಕ್ತ ಎಂದು ಆಯ್ಕೆ ಮಾಡಿದ್ದಾರೆ. ದೆಹಲಿಯಿಂದ ಆಯ್ಕೆ ಸಮಿತಿ ಬಂದಿತ್ತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದರು. ಬಳಿಕ ಸೋನಿಯಾ ಗಾಂಧಿ ಆಯ್ಕೆ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕಿದೆ. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಈ ರಾಜ್ಯದ ಜನತೆ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಬಿಜೆಪಿ ಯಾವುದೇ ಕೆಲಸಗಳನ್ನ ಮಾಡದೇ ಕೇವಲ ಪ್ರಚಾರಗಿಟ್ಟಿಸಿ ಚುನಾವಣೆಗೆ ಹೋಗುತ್ತಿದೆ. ಸಿದ್ದರಾಮಯ್ಯ ಐದು ವರ್ಷ ರಾಜ್ಯದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡಿದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News