ಸಿದ್ದರಾಮಯ್ಯ ವ್ಯಕ್ತಿಯಲ್ಲ, ಶಕ್ತಿ ಎಂದು ದೇವೇಗೌಡರೇ ಹೇಳಿದ್ದರು

Update: 2019-10-19 16:06 GMT

ಮೈಸೂರು,ಅ.19: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಕ್ತಿಯಲ್ಲ ಒಂದು ಶಕ್ತಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ವಿಧಾನಸೌಧದ ಮೂರನೆ ಮಹಡಿಯಲ್ಲಿ ಈ ಹಿಂದೆ ಹೇಳಿದ್ದರು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. 

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿ ನಂತರ ಮಾತನಾಡಿದರು. ಇಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯ ಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಬಿಜೆಪಿಯ ಆಡಳಿತ ವೈಫಲ್ಯ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.

ಸಿದ್ದರಾಮಯ್ಯ ವ್ಯಕ್ತಿಯಲ್ಲ, ಒಂದು ಶಕ್ತಿ. ಹಾಗಾಗೆ ಅವರು ಈ ಮಟ್ಟಕ್ಕೆ ಬೆಳೆದಿರುವುದು. ಬಿಜೆಪಿಯವರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಆಡಳಿತವನ್ನು ರಾಜ್ಯದ ಜನರಿಗೆ ತಿಳಿಸಿಕೊಟ್ಟು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ಅದು ಸಾಮಾನ್ಯ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದ ಅವರು, ಮಹಾತ್ಮಾ ಗಾಂಧೀಜಿಯವರ 150ನೇ ವರ್ಷಾಚರಣೆ ಸಂದರ್ಭದಲ್ಲಿ ನಮಗೆ ಗಾಂಧಿ ಭಾರತ ಬೇಕೆ ಅಥವಾ ಗೋಡ್ಸೆ ಭಾರತ ಬೇಕೆ ಎಂಬ ಬಗ್ಗೆ ದೇಶದ ಜನ ತೀರ್ಮಾನ ಮಾಡಬೇಕಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಯಾವ ರೀತಿ ಹಾರ ತುರಾಯಿಗಳನ್ನು ತಂದು ಹಾಕಿದರೋ ಅದೇ ರೀತಿ ಉಪಚುನಾವನೆಗಳಲ್ಲಿ ಬಂದು ಕೆಲಸ ಮಾಡಿ, ನಮ್ಮ ಸರಕಾರ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಜನರಿಗೆ ತಿಳಿಸಿ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News