ಪಿಯು ಉಪನ್ಯಾಸಕರ ನೇಮಕಾತಿಯಲ್ಲಿ ಲೋಪ ದೋಷ: ಹರೀಶ್ ಗೌಡ ನೇತೃತ್ವದ ಸಮಿತಿ ವರದಿ ಬಹಿರಂಗಕ್ಕೆ ಆಗ್ರಹ

Update: 2019-10-19 17:09 GMT

ಬೆಂಗಳೂರು, ಅ.19: 2014-15ನೇ ಸಾಲಿನಲ್ಲಿ ಪಿ.ಯು. ಉಪನ್ಯಾಸಕರ ನೇಮಕಾತಿಯಲ್ಲಿ ಆಗಿರುವ ಲೋಪದೋಷಗಳ ಕುರಿತು ಬಿ.ಎ. ಹರೀಶ್ ಗೌಡ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕ ಹುದ್ದೆಯ ಆಕಾಂಕ್ಷಿ ಅರ್ಜುನ್, 2014-15ನೇ ಸಾಲಿನ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿಯಲ್ಲಿ ಆಗಿರುವ ಕೀ ಉತ್ತರ ಹಾಗೂ ಮೀಸಲಾತಿ ಸಂಬಂಧ ಕನ್ನಡದ ಹಿರಿಯ ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಅನೇಕ ವಿದ್ವಾಂಸರು ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅ. 3 ರಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಎ. ಹರೀಶ್ ಗೌಡ ನೇತೃತ್ವದ ಸಮಿತಿ ರಚಿಸಿ ಈ ನೇಮಕಾತಿಯಲ್ಲಿ ಆಗಿರುವ ಲೋಪ ದೋಷಗಳ ಕುರಿತು ಸಮಗ್ರವಾಗಿ ತನಿಖೆ ಮಾಡಿ ವರದಿ ನೀಡುವಂತೆ ಆದೇಶಿಸಿದ್ದರು ಎಂದು ತಿಳಿಸಿದರು.

ಅದರಂತೆ ಅ.10 ರಂದು ಈ ನೇಮಕಾತಿಯಲ್ಲಿ ಆಗಿರುವ ಲೋಪ ದೋಷಗಳ ಕುರಿತು ಸಮಗ್ರ ವರದಿಯನ್ನು ಶಿಕ್ಷಣ ಸಚಿವರಿಗೆ ನೀಡಿದ್ದಾರೆ. ಆ ವರದಿಯನ್ನು ಶಿಕ್ಷಣ ಸಚಿವರು ಸಾರ್ವಜನಿಕವಾಗಿ ಬಹಿರಂಗೊಳಿಸಬೇಕು. ಸಮಿತಿಯು ನೀಡಿರುವ ವರದಿಯನ್ನು ಶಿಫಾರಸ್ಸುಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಿ.ಎ.ಹರೀಶ್ ಗೌಡ ನೇತೃತ್ವದ ಸಮಿತಿ ತನಿಖೆ ಮಾಡಿರುವ ವರದಿಯನ್ನು ಗೌಪ್ಯವಾಗಿ ಇಟ್ಟಿರುವ ಉದ್ದೇಶವೇನು ಎಂಬುದರ ಬಗ್ಗೆ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಬೇಕು. ಈಗಾಗಲೇ ಪ್ರಕಟಿಸಿರುವ ಉಪನ್ಯಾಸಕರ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಹರೀಶ್ ಗೌಡ ನೇತೃತ್ವದಲ್ಲಿ ತನಿಖೆ ಮಾಡಿ ಸಲ್ಲಿಸಿರುವ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ಸುಮಾರು ಐದು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಇದೇ ನೇಮಕಾತಿಗೆ ಸೇರ್ಪಡೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News