ಯಾವುದೇ ಚುನಾವಣೆ ಎದುರಿಸಲು ಸಿದ್ಧ: ದಿನೇಶ್ ಗುಂಡೂರಾವ್

Update: 2019-10-19 17:20 GMT

ಮಂಡ್ಯ, ಅ.1: ಉಪ ಚುನಾವಣೆಯಾಗಲಿ, ಸಾರ್ವತ್ರಿಕ ಚುನಾವಣೆ ಬರಲಿ, ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು.  ಚುನಾವಣೆ ಬಂದರೆ ಎದುರಿಸುತ್ತೇವೆ, ಇಲ್ಲ ಅಂದರೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಉಪ ಚುನಾವಣೆ ಸಂಬಂಧ ಕೋರ್ಟ್ ತೀರ್ಪು ಏನಾಗುತ್ತೆ ನೋಡೋಣ. ನಾವು ಎಲ್ಲಾ ತಯಾರಾಗಿದ್ದೇವೆ. ಯಾರನ್ನು ಅಭ್ಯರ್ಥಿ ಮಾಡ್ಬೇಕು ಎಂಬುವುದೂ ನಿರ್ಧಾರ ಆಗಿದೆ ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿ ಸರಕಾರದಿಂದ ಜನರಿಗೆ ಭ್ರಮನಿರಸನ ಆಗಿದೆ. ಆಡಳಿತ ಸಂಪೂರ್ಣ ಕುಸಿದಿದೆ. ಸಿಎಂಗೆ ಏನು ಕೇಳಿದರೂ 'ನನ್ನತ್ರ ಹಣವಿಲ್ಲ, ಅಧಿಕಾರ ನಡೆಸೋಕಾಗ್ತಿಲ್ಲ' ಅಂತಿದ್ದಾರೆ ಎಂದು ಅವರು ಟೀಕಿಸಿದರು.

ತನ್ನ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಸಪೋರ್ಟ್ ಮಾಡಿದ್ದಾರೆ, ಪಕ್ಷ ಮಾಡಿಲ್ಲ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಸುಮಲತಾ ಬಗ್ಗೆ ಮಾತನಾಡಲ್ಲ. ಅವತ್ತಿನ ವಾತಾವರಣ ಹೇಗಿತ್ತು ಎಂಬುದು ಜನರಿಗೆ ತಿಳಿದಿದೆ ಎಂದರು.

ಕಾಂಗ್ರೆಸ್ ಇನ್ನು ಮುಂದೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಗರಸಭೆ ಆಗಲಿ, ಪಂಚಾಯತ್ ಚುನಾವಣೆ ಆಗಲಿ, ಯಾವುದೇ ಚುನಾವಣೆಯಾಗಲಿ ಸ್ವತಂತ್ರವಾಗಿ ಎದುರಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಎಸ್‍ನವರು ಬಿಜೆಪಿ ಜೊತೆ ಸಖ್ಯನೂ ಮಾಡಿದ್ದಾರೆ, ವಿರೋಧವನ್ನೂ ಮಾಡಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ಸಿದ್ದಾಂತದ ಮೇಲೆ ನಮಗೆ ನಂಬಿಕೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಾವರ್ಕರ್ ಬಿಜೆಪಿಗೆ ದೊಡ್ಡ ಮುಖಂಡ ಇರಬಹುದು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ಬಳಿ ಕ್ಷಮೆ ಕೋರಿ ಪತ್ರ ಬರೆದಿದ್ದರು. ಹಾಗಾಗಿ ಅವರಿಗೆ ಭಾರತ ರತ್ನ ಬೇಡ ಅನ್ನುವುದು ನಮ್ಮ ವಾದ ಎಂದು ದಿನೇಶ್ ಪುನರುಚ್ಚರಿಸಿದರು. ಸಾವರ್ಕರ್ ಸಿದ್ದಾಂತಗಳ ಬಗ್ಗೆ ಬಿಜೆಪಿಗೆ ವಿಶ್ವಾಸವಿರಲಿ, ಅದರ ಬಗ್ಗೆ ನಮ್ಮ ತಕರಾರು ಇಲ್ಲ. ಬ್ರಿಟೀಷರಲ್ಲಿ ಭಗತ್‍ಸಿಂಗ್, ಗಾಂಧೀಜಿ, ಸರ್ದಾರ್ ಪಟೇಲ್, ನೆಹರು ಯಾರು ಕೂಡ ಕ್ಷಮೆ ಕೇಳಲಿಲ್ಲ. ಸಾವರ್ಕರ್ ಕ್ಷಮೆ ಕೇಳಿದ್ದರು ಎಂದರು.

ಬ್ರಿಟಿಷರು ಬಂಧನ ಮಾಡುವವರೆಗೆ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ, ಜೈಲಿನಿಂದ ಬಿಡುಗಡೆಯಾದ ಬಳಿಕ ಸ್ವಾತಂತ್ರ್ಯ ಹೋರಾಟ ಕೂಡ ಮಾಡಿಲಿಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ದಿನೇಶ್ ಗುಂಡೂರಾವ್ ಅವರಿಗೆ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News