ಹಂಪಿ ಕನ್ನಡ ವಿವಿ: ಪಿಎಚ್.ಡಿ ಪರೀಕ್ಷೆ ಬರೆದ ಎಲ್ಲರೂ ಅನುತ್ತೀರ್ಣ !

Update: 2019-10-19 17:23 GMT
ಸಾಂದರ್ಭಿಕ ಚಿತ್ರ

ಬಳ್ಳಾರಿ, ಅ.19: ಹೊಸಪೇಟೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಎಂ.ಎ., ಪಿಎಚ್.ಡಿ ಸಂಯೋಜಿತ ಕೋರ್ಸ್‌ನ ಪ್ರವೇಶಕ್ಕೆ ಇತ್ತೀಚಿಗೆ ನಡೆದ ಪರೀಕ್ಷೆಯಲ್ಲಿ ಎಲ್ಲರೂ ಅನುತ್ತೀರ್ಣರಾಗಿದ್ದಾರೆ.

ಆ. 21ರಂದು ನಡೆದ ಪರೀಕ್ಷೆಗೆ ಒಟ್ಟು 35 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 21 ವಿದ್ಯಾರ್ಥಿಗಳು ಸಂದರ್ಶನವನ್ನೂ ಎದುರಿಸಿದ್ದರು. ಎರಡು ತಿಂಗಳ ಬಳಿಕ ಫಲಿತಾಂಶ ಬಂದಿದ್ದು, ಅಚ್ಚರಿ ಎಂಬಂತೆ ಎಲ್ಲರೂ ಅನುತ್ತೀರ್ಣಗೊಂಡಿದ್ದಾರೆ.

ಈ ಸಂಯೋಜಿತ ಕೋರ್ಸಿಗೆ ಶೈಕ್ಷಣಿಕ ಪ್ರಾಧಿಕಾರದ ಅನುಮತಿಯೇ ಇರಲಿಲ್ಲ ಎಂದು ಗೊತ್ತಾಗಿದೆ. ಹೀಗಿದ್ದರೂ ಪರೀಕ್ಷೆ ನಡೆಸಲಾಗಿದೆ. ಅಷ್ಟೇ ಅಲ್ಲ, ಇದೇ ವಿಭಾಗದಲ್ಲಿ ಪ್ರಸ್ತುತ ಐದನೇ ಸೆಮಿಸ್ಟರ್‌ನಲ್ಲಿ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಈ ಕೋರ್ಸ್ ಅನ್ನು 2017ರಲ್ಲಿ ಆರಂಭಿಸಲಾಗಿದೆ. ಈ ಹಿಂದಿನ ಎರಡು ವರ್ಷ ನೇರ ಪ್ರವೇಶ ನೀಡಲಾಗಿತ್ತು. ಯುಜಿಸಿ ನಿಯಾಮವಳಿ ಪ್ರಕಾರ, ಈ ವರ್ಷ ಮೊದಲ ಸಲ ಪ್ರವೇಶ ಪರೀಕ್ಷೆ ನಡೆಸಲಾಗಿದೆ.

ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಪ್ರತಿಕ್ರಿಯಿಸಿದ್ದು, ನಿಯಮದಂತೆ ಪ್ರವೇಶ ಪರೀಕ್ಷೆ ನಡೆಸಲಾಗಿದೆ. ಎಲ್ಲರೂ ಫೇಲಾಗಿದ್ದಾರೆ. ಯಾರಿಗಾದರೂ ಗೊಂದಲ, ಅನುಮಾನವಿದ್ದಲ್ಲಿ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಬಹುದು ಎಂದು ಹೇಳಿದ್ದಾರೆ.

ಈ ಹಿಂದೆಯೇ ಕೋರ್ಸ್ ಆರಂಭಿಸಲಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಸಂಯೋಜಿತ ಕೋರ್ಸಿನ ವಿಭಾಗದ ಅನುಮತಿಗಾಗಿ ಈಗಾಗಲೇ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇಷ್ಟರಲ್ಲೇ ಅನುಮತಿ ಸಿಗಬಹುದು. ಯಾವ ವಿಭಾಗವೂ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News