ಸಾವರ್ಕರ್‌ ವಿರುದ್ಧ ಹೇಳಿಕೆ ನೀಡಿದ ಸಿದ್ದರಾಮಯ್ಯ ಪ್ರತಿಫಲ ಅನುಭವಿಸುತ್ತಾರೆ: ಜಗದೀಶ್ ಶೆಟ್ಟರ್

Update: 2019-10-20 12:21 GMT

ಬೆಂಗಳೂರು, ಅ. 20: ಸಾವರ್ಕರ್‌ಗೆ ‘ಭಾರತ ರತ್ನ’ ನೀಡಬೇಕೆಂಬ ಬಿಜೆಪಿ ನಿಲುವಿಗೆ ಆಕ್ಷೇಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದಿದ್ದು, ಸಿದ್ದರಾಮಯ್ಯನವರನ್ನು ಹಡಗಿನಲ್ಲಿ ಅಂಡಮಾನ್-ನಿಕೋಬರ್‌ಗೆ ಕಳುಹಿಸಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.

ಸಾವರ್ಕರ್ ಕುರಿತು ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯಬೇಕೆಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದರೆ, ಸಚಿವ ಜಗದೀಶ್ ಶೆಟ್ಟರ್ ಅವರು ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಾವರ್ಕರ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದನ್ನು ಸಿದ್ದರಾಮಯ್ಯ ನೋಡಿದ್ದರೆ, ಈ ಬಗ್ಗೆ ಕೋರ್ಟ್ ಸ್ಪಷ್ಟನೆ ನೀಡಿದೆ. ಸಿದ್ದರಾಮಯ್ಯನವರಿಗೆ ಸ್ವಾತಂತ್ರ ಹೋರಾಟದ ಗಂಧ-ಗಾಳಿಯೇ ಗೊತ್ತಿಲ್ಲ’ ಎಂದು ಬಿಜೆಪಿ ಮುಖಂಡ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

‘ಸಿದ್ದರಾಮಯ್ಯ ರಾತ್ರಿ ಎಲ್ಲ ನಿದ್ದೆಗೆಟ್ಟು ಏನೇನೋ ಮಾತನಾಡಬೇಕೆಂಬ ಯೋಚನೆಯಲ್ಲಿರುತ್ತಾರೆ. ಇಂತಹ ಸಮಯದಲ್ಲಿ ಈ ರೀತಿಯ ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಐದು ವರ್ಷ ಸಿಎಂ ಆಗಿದ್ದಾಗ ಅವರನ್ನು ಹೇಗೆ ಸಹಿಸಿಕೊಂಡಿದ್ದೇವು ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಕೇಂದ್ರ ಸಚಿವ ಸದಾನಂದಗೌಡ ಟೀಕಿಸಿದ್ದಾರೆ.

ಹೇಳಿಕೆ ಸಲ್ಲ: ಸಾವರ್ಕರ್ ಅವರಿಗೆ ಭಾರತರತ್ನ ಕೊಡುವ ವಿಚಾರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಅವರ ಸ್ಥಾನಕ್ಕೆ ಗೌರವ ತರುವಂತದಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಹೇಳಿದ್ದಾರೆ. ಯಾರೇ ಆಗಲಿ ರಾಜಕೀಯ ಹೇಳಿಕೆ ಕೊಡುವುದು ಸರಿಯಲ್ಲ. ಹೇಳಿಕೆಗಳನ್ನು ಸಿದ್ದರಾಮಯ್ಯ ನಿಲ್ಲಿಸಲಿ. ಈಗಾಗಲೇ ಜನ ಅವರಿಗೆ ಬುದ್ಧಿ ಕಲಿಸಿದ್ದಾರೆ ಇನ್ನೂ ಬುದ್ಧಿ ಬಂದಿಲ್ಲವೆಂದರೆ ಏನು ಮಾಡೋಣ ಎಂದು ಅವರು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

ಶ್ರೀಗಳಿಗೆ ಭಾರತ ರತ್ನ ಮೊದಲ ಆದ್ಯತೆ

ಸಿದ್ದಗಂಗಾಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಿಸುವುದು ನಮ್ಮ ಮೊದಲ ಆದ್ಯತೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಶಿವಕುಮಾರ್ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವ ಬಗ್ಗೆ ಸಿದ್ದರಾಮಯ್ಯನವರು ಪದೇ ಪದೇ ಪ್ರಸ್ತಾಪಿಸುತ್ತಿರುವುದು ಇತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ, ಮೊದಲಿನಿಂದಲೂ ಬಿಜೆಪಿ ಶ್ರೀಗಳಿಗೆ ಭಾರತ ರತ್ನ ಪ್ರಶಸಿ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದೆ. ಈ ಬಗ್ಗೆ ವಿನಾಕಾರಣ ರಾಜಕೀಯ ಸಲ್ಲದು ಎಂದು ಹೇಳಿದರು.

ಸಾವರ್ಕರ್‌ಬಗ್ಗೆ ಕುಹಕವಾಗಿ ಮಾತನಾಡುವ ಬದಲು ಅಂಡಮಾನ್-ನಿಕೋಬಾರ್‌ಗೆ ಹೋಗಿ ಮಾಹಿತಿ ತಿಳಿದುಕೊಂಡು ಬರಲಿ, ಅವರ ಪಯಣಕ್ಕೆ ಬೇಕಾದ ಖರ್ಚು ವೆಚ್ಚವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಕೊಡುತ್ತೇವೆ. ಗೂಬೆ ಕೂರಿಸುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಡಿವಿಎಸ್ ಟೀಕಿಸಿದರು.

ಸಿದ್ದರಾಮಯ್ಯ ಕ್ಷಮೆಯಾಚಿಸಲಿ: ಸಾರ್ವಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಪ್ರತಿಫಲ ಉಣ್ಣಬೇಕು: ಬ್ರಿಟಿಷರ ವಿರುದ್ಧ ಹೋರಾಡಿದ ಸಾವರ್ಕರ್ ವಿರುದ್ಧ ಕೀಳಾಗಿ ಮತ್ತು ಏಕವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಮುಂದೆ ಅದರ ಪ್ರತಿಫಲ ಅನುಭವಿಸುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

ಅವಹೇಳನಕಾರಿಯಾಗಿ ಮಾತನಾಡಿದರೆ ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾಗುತ್ತೇನೆ ಎಂದು ಅಂದುಕೊಂಡಿರುವ ಸಿದ್ದರಾಮಯ್ಯ, ಕಾಂಗ್ರೆಸ್‌ನೊಳಗೆ ತಮ್ಮ ನಾಯಕತ್ವದ ವಿರುದ್ಧ ಎದ್ದಿರುವ ಅಸಮಾಧಾನವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಶೋಭೆ ತರುವುದಿಲ್ಲ: ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವರು ಈ ರೀತಿ ಕೀಳಾಗಿ ಮಾಡನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ಮೊದಲು ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಸಲಹೆ ನೀಡಿದರು.

‘ಕೆಲ ವಿಷಗಳಲ್ಲಿ ಸಿದ್ದರಾಮಯ್ಯ ನೀಚ ರಾಜಕಾರಣ ಮಾಡುತ್ತಿದ್ದು, ಆತ್ಮ ಇಲ್ಲದ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 5ಕ್ಕಿಂತ ಹೆಚ್ಚು ಸ್ಥಾನ ಬಂದರೆ ನಾನು ರಾಜೀನಾಮೆ ನೀಡುವೆ. ಕಡಿಮೆ ಸ್ಥಾನ ಬಂದರೆ ಸಿದ್ದರಾಮಯ್ಯ ರಾಜೀನಾಮೆ ನೀಡುವರೇ’

-ರವಿಕುಮಾರ್ ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News