ಓ ಮೆಣಸೇ…

Update: 2019-10-20 18:19 GMT

ನಾಯಕರಾದವರು ಹೊಂದಾಣಿಕೆ ರಾಜಕೀಯ ಮಾಡದೆ ನಾಡಿಗೆ ಒಳಿತಾಗುವ ಕೆಲಸ ಮಾಡಬೇಕು - ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಹೊಂದಾಣಿಕೆ ರಾಜಕೀಯ ಮಾಡದೇ ಇದ್ದಿದ್ದರೆ ನೀವು ಮುಖ್ಯಮಂತ್ರಿ ಆಗುವುದು ಸಾಧ್ಯವಾಗುತ್ತಿರಲಿಲ್ಲ.

---------------------

ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗುಟ್ಟಾಗಿ ಚರ್ಚಿಸಬಾರದು - ಕೆ.ಆರ್. ರಮೇಶ್ ಕುಮಾರ್, ಮಾಜಿ ಸ್ಪೀಕರ್
ಅವರು ಚರ್ಚಿಸುತ್ತಿರುವುದು ರಾಜ್ಯಕ್ಕೆ ಸಂಬಂಧಿಸಿದ ವಿಷಯವೆಂದು ನಿಮಗೆ ಹೇಳಿದವರು ಯಾರು?

---------------------

ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಗೆ ನೆರವಾಗಲು ಭಾರತೀಯ ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಾವು ಸಿದ್ಧ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಭಾರತದ ಸಂಘಪರಿವಾರ ನಿಗ್ರಹಕ್ಕೆ ಪಾಕಿಸ್ತಾನಿ ಸೇನೆಯ ನೆರೆವನ್ನು ಪಡೆದುಕೊಳ್ಳುವುದಾದರೆ ಅವರು ಒಪ್ಪಬಹುದು.

---------------------

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಲು 56 ಇಂಚು ಎದೆಯ ಪ್ರಧಾನಿ ನರೇಂದ್ರ ಮೋದಿಯೇ ಬರಬೇಕಾಯಿತು - ಅಮಿತ್ ಶಾ, ಕೇಂದ್ರ ಸಚಿವ
   ದೇಶದ ಸ್ಥಾನಮಾನವೇ ವಿಶ್ವದಲ್ಲಿ ರದ್ದಾಗಿರುವಾಗ ಇನ್ನು ಕಾಶ್ಮೀರದ ಬಗ್ಗೆ ಹೇಳುವುದೇನಿದೆ.

---------------------

ಯುವಕರು ಉದ್ಯೋಗ ಕೇಳಿದರೆ ಕೇಂದ್ರ ಸರಕಾರ ಚಂದಮಾಮನನ್ನು ತೋರಿಸುತ್ತ್ತಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಚಂದ್ರಯಾನ ಯಶಸ್ವಿಯಾಗಿದ್ದರೆ, ನಿರುದ್ಯೋಗಿಗಳನ್ನೆಲ್ಲ ಅಲ್ಲಿಗೇ ಕಳುಹಿಸುವ ಯೋಜನೆಯಿದೆಯಂತೆ.

---------------------

ಸಂಸದ ನಳಿನ್‌ಕುಮಾರ್ ಕಟೀಲು ಗೋಲಿ ಆಡುವ ಮಕ್ಕಳಂತೆ ವರ್ತಿಸುತ್ತಿದ್ದಾರೆ - ಸಿದ್ದರಾಮಯ್ಯ, ಮಾಜಿಮುಖ್ಯಮಂತ್ರಿ
ವರ್ತಿಸುವುದೇನೂ ಅಲ್ಲ, ತಮ್ಮ ವಿರಾಮದ ಹೊತ್ತಿನಲ್ಲಿ ಅವರು ಗೋಲಿ ಆಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

---------------------

370ನೇ ವಿಧಿ ರದ್ದತಿಯು ಅಂಬೇಡ್ಕರ್ ಮತ್ತು ಶಿವಾಜಿಗೆ ಸಲ್ಲಿಸಿದ ಗೌರವ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಇನ್ನು ಸಂವಿಧಾನ ರದ್ದತಿಯೊಂದು ಬಾಕಿ ಉಳಿದಿದೆ.

---------------------

ಭಾರತದಲ್ಲಿ ಮುಸ್ಲಿಮರು ತುಂಬಾ ಸಂತೋಷದಿಂದಿದ್ದಾರೆ ಇದಕ್ಕೆ ನಾವು ಹಿಂದೂಗಳಾಗಿರುವುದೇ ಕಾರಣ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ದಲಿತರು ಸಂತೋಷದಲ್ಲಿ ಇರದೇ ಇರುವುದಕ್ಕೆ ಯಾರು ಕಾರಣ?

---------------------

ವಿದ್ಯುನ್ಮಾನ ಮತ ಯಂತ್ರದಲ್ಲಿ ಕಮಲ ಚಿಹ್ನೆಯ ಗುಂಡಿ ಒತ್ತಿದರೆ, ಪಾಕ್ ಮೇಲೆ ಅಣು ಬಾಂಬ್ ಹಾಕಿದಂತೆ - ಕೇಶವ್ ಪ್ರಸಾದ್ ವೌರ್ಯ, ಉ.ಪ್ರ. ಉಪಮುಖ್ಯಮಂತ್ರಿ
ಹಾಗೆಂದು ಹೇಳಿ ಗೆದ್ದು, ಈಗ ದೇಶದ ಜನರ ಮೇಲೆಯೇ ಬಾಂಬ್ ಹಾಕುತ್ತಿದ್ದಾರೆ.

---------------------

ಒಂದು ವೇಳೆ ನನ್ನ ಮೇಲೆ ಆದಾಯ ತೆರಿಗೆ ದಾಳಿಯಾದರೆ ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಕಾರಣ - ಕೆ.ಎನ್. ರಾಜಣ್ಣ, ಮಾಜಿ ಸಚಿವ
ಅಂದರೆ ಅವರ ಮನೆಯಲ್ಲಿರುವ ಅಕ್ರಮ ಹಣವನ್ನೆಲ್ಲ ನಿಮ್ಮ ಮನೆಯಲ್ಲಿ ಇಡಲು ಕೊಟ್ಟಿದ್ದಾರೆಯೇ?

---------------------
ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ, ಆದರೂ ರಾಜಕೀಯದಿಂದ ನಿವೃತ್ತಿ ಆಗಲಾರೆ - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಯಾವುದಾದರೂ ನೋವಿನ ಎಣ್ಣೆ ಹಚ್ಚಿ ನೋಡಿ.

---------------------

ನಮ್ಮ ಪೂರ್ವಜರು ಕಂಡುಕೊಂಡ ಒಂದೊಂದು ವಿದ್ಯೆಯೂ ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ರೂಪುಗೆಟ್ಟಿದೆ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಶೀಲಗೆಟ್ಟ ಸಂಬಂಧ ಪಾಶ್ಚಿಮಾತ್ಯರ ಕೊಡುಗೆಯೋ, ಪೂರ್ವಜರದೋ?

---------------------

ಆರ್ಥಿಕ ಕುಸಿತ ಇಲ್ಲ ಎಂದು ನಿರಾಕರಿಸುತ್ತಿರುವವರು, ಚಕ್ರವರ್ತಿ ನಗ್ನನಾಗಿದ್ದಾರೆ ಎಂದು ತಿಳಿಯದವರು
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಅವರು ದುಬಾರಿ ಬಟ್ಟೆ ಹಾಕಿದರೂ ಟೀಕಿಸುತ್ತೀರಿ, ಇದೀಗ ನಗ್ನರಾದರೂ ಟೀಕಿಸುತ್ತೀರಿ?

---------------------

ಚೀನಾವನ್ನು ವಿಭಜಿಸಲು ಯತ್ನಿಸಿದರೆ ದೇಹಗಳು ಚೂರು ಚೂರು, ಎಲುಬುಗಳು ಪುಡಿ ಪುಡಿಯಾಗುತ್ತವೆ - ಕ್ಸಿ ಜಿನ್ ಪಿಂಗ್, ಚೀನಾ ಅಧ್ಯಕ್ಷ
ತಿಯಾನೈನ್ ಚೌಕ ಹತ್ಯಾಕಾಂಡ ಪುನರಾವರ್ತನೆಯಾಗುವ ಸೂಚನೆ ನೀಡುತ್ತಿದ್ದಾರೆ.

---------------------

ಪಾಕಿಸ್ತಾನದ ರಾಜ್ಯನೀತಿ ಭಯೋತ್ಪಾದಕರಿಗೆ ಸುರಕ್ಷಿತ ಸಂತಾನೋತ್ಪತ್ತಿಯನ್ನು ಒದಗಿಸುತ್ತದೆ - ಅಜಿತ್‌ದೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ
ಭಾರತದಲ್ಲಿ ಬೆಳೆಯುತ್ತಿರುವ ಸಂಘಪರಿವಾರ ಭಯೋತ್ಪಾದಕರ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ತಲೆಕೆಡಿಸಿಕೊಳ್ಳುವುದು ಯಾವಾಗ?

---------------------

ಬಿಜೆಪಿ ಸಹಿತ ಯಾವುದೇ ಪಕ್ಷದವರು ಕಾಂಗ್ರೆಸ್‌ಗೆ ಬಂದರೂ ಸ್ವಾಗತ - ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ
ಇಡೀ ಕಾಂಗ್ರೆಸ್ ಪಕ್ಷ ಬಿಜೆಪಿ ಸೇರಿದರೆ ಸಾಕು, ಸುಮ್ಮನೆ ಅವರೇಕೆ ಬರುವುದು?

---------------------

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ
ಸಾಲಮನ್ನಾ ಮಾಡುವ ಹಣವನ್ನೆಲ್ಲ ಅನರ್ಹ ಶಾಸಕರಿಗೆ ನೀಡಿ ಸಾಲ ಸಂದಾಯ ಮಾಡಿರಬೇಕು.

---------------------

ದೇಶೀ ಶಸತ್ತ್ತ್ರಾಸ್ತ್ರ ಬಳಸಿಯೇ ಭಾರತ ಮುಂದಿನ ಯುದ್ಧ ಗೆಲ್ಲಲಿದೆ - ಬಿಪಿನ್ ರಾವತ್, ಸೇನೆಯ ಮುಖ್ಯಸ್ಥ
ಅಂದರೆ ನಿಂಬೆ ಹಣ್ಣಿನ ಬಗ್ಗೆ ಹೇಳುತ್ತಿದ್ದಾರೆ.

---------------------

ನನ್ನನ್ನು 25 ಕೋಟಿ ರೂ.ಗೆ ಖರೀದಿಸಿದ ಮಗ ಇದ್ದರೆ ಆತನನ್ನು ತೋರಿಸಿ - ಎಚ್. ವಿಶ್ವನಾಥ್, ಅನರ್ಹಶಾಸಕ
ಅಂದರೆ ಅಷ್ಟೂ ಬೆಲೆಬಾಳುವುದಿಲ್ಲವೇ?

---------------------

ನಾನು ಸೂಕ್ತ ಸಮಯದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ - ಮಾಯಾವತಿ, ಬಿಎಸ್ಪಿ ವರಿಷ್ಠೆ
  ಹಾಗಾದರೆ ಈಗ ಯಾವ ಧರ್ಮದಲ್ಲಿದ್ದೀರಿ?

---------------------

ನಟರು ಮತ್ತು ನಿರ್ದೇಶಕರ ನಡುವಿನ ಸಂಬಂಧ ಚೆನ್ನಾಗಿದ್ದಾಗ ಒಳ್ಳೆಯ ಚಿತ್ರ ನಿರ್ಮಾಣವಾದ ಸಾಕಷ್ಟು ಉದಾಹರಣೆಗಳಿವೆ - ಆಲಿಯಾ ಭಟ್, ನಟಿ
ನಟಿಯರ ಜೊತೆಗೆ ಸಂಬಂಧವಿರುವುದು ಬೆಳಕಿಗೆ ಬಂದಿತ್ತು, ನಟರೂ ಸಂಬಂಧವಿಡುವುದು ಅಗತ್ಯವೆನ್ನುವುದು ಗೊತ್ತಾಯಿತು.

---------------------

ಕೇವಲ ವಿಪಕ್ಷಗಳ ಮೇಲೆ ಆರೋಪ ಮಾಡುವುದರಿಂದ ಆರ್ಥಿಕತೆ ಹಳಿಗೆ ಬರುವುದಿಲ್ಲ - ಡಾ. ಮನಮೋಹನ್ ಸಿಂಗ್, ಮಾಜಿ ಪ್ರಧಾನಿ
ಹಳಿಗೆ ಬರದಿದ್ದರೂ ಪರವಾಗಿಲ್ಲ, ತಮ್ಮ ಕುತ್ತಿಗೆಗೆ ಬರಬಾರದು ಎನ್ನುವುದು ಅವರ ಉದ್ದೇಶ.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...