ಕಮಲೇಶ್ ತಿವಾರಿ ಹತ್ಯೆ: ತಾಯಿಯ ಅರಣ್ಯ ರೋದನ

Update: 2019-10-21 04:45 GMT

ಯೊ ೀಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ದಿನದಿಂದ ಆ ರಾಜ್ಯ ದೇಶಾದ್ಯಂತ ಕುಖ್ಯಾತಿಯನ್ನು ಪಡೆಯುತ್ತಿದೆ. ಸ್ವತಃ ಮೈಮೇಲೆ ಹಲವು ಕ್ರಿಮಿನಲ್ ಆರೋಪಗಳನ್ನು ಹೊತ್ತುಕೊಂಡಿದ್ದ ನಾಯಕನೊಬ್ಬನ ಕೈಗೆ ಒಂದು ರಾಜ್ಯದ ಚುಕ್ಕಾಣಿಯನ್ನು ನೀಡಿದರೆ ಆ ರಾಜ್ಯ ಎಂತಹ ದೈನೇಸಿ ಸ್ಥಿತಿಗೆ ತಲುಪಬಹುದು ಎನ್ನುವುದಕ್ಕೆ ಉತ್ತರ ಪ್ರದೇಶ ಅತ್ಯುತ್ತಮ ಉದಾಹರಣೆಯಾಗಿದೆ. ಯೋಗಿ ಆದಿತ್ಯನಾಥ್ ನಾಯಕನಾಗಿ ಬೆಳೆದಿರುವುದು ಯಾವುದೇ, ಚಳವಳಿ, ಹೋರಾಟ, ಸಾಮಾಜಿಕ ಸೇವೆಯ ಮೂಲಕ ಅಲ್ಲ. ದ್ವೇಷ ಭಾಷಣಗಳನ್ನು ಬಿತ್ತಿ, ತನ್ನ ಸುತ್ತ ಕ್ರಿಮಿನಲ್ ಆರೋಪಿಗಳನ್ನು ಕಟ್ಟಿಕೊಂಡು ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದಾರೆ.

ಅವರು ಉತ್ತರಪ್ರದೇಶದ ಚುಕ್ಕಾಣಿ ಹಿಡಿಯುತ್ತಾರೆನ್ನುವ ಕಲ್ಪನೆ ಸ್ವತಃ ಬಿಜೆಪಿಯೊಳಗಿರುವ ನಾಯಕರಿಗೂ ಇದ್ದಿರಲಿಲ್ಲ. ಯಾವುದೇ ರಾಜಕೀಯ ಮುತ್ಸದ್ದಿತನವಿಲ್ಲದ ಈ ಸ್ವಯಂಘೋಷಿತ ಯೋಗಿ ಅಧಿಕಾರ ಹಿಡಿದ ದಿನದಿಂದ ಉತ್ತರ ಪ್ರದೇಶ ಕತ್ತಲೆಯತ್ತ ಜಾರುತ್ತಿದೆ. ಆರೋಗ್ಯ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಪ್ರದೇಶ ಹಿಂದಕ್ಕೆ ಹೆಜ್ಜೆಯಿಡುತ್ತಿದೆ. ಆಮ್ಲಜನಕ ಸಿಲಿಂಡರ್ ಇಲ್ಲದೆ ನೂರಾರು ಮಕ್ಕಳು ಸಾವಿಗೀಡಾದಾಗ, ಹೊಣೆಗಾರಿಕೆಯಿಂದ ಪಾರಾಗಲು, ಅಮಾಯಕ ವೈದ್ಯರೊಬ್ಬರ ತಲೆಗೆ ಪ್ರಮಾದವನ್ನು ಕಟ್ಟಲು ಹೋಗಿ, ನ್ಯಾಯಾಲಯದಿಂದ ಮುಖಭಂಗಕ್ಕೀಡಾದರು. ಇಂದು ಲಿಂಚಿಂಗ್‌ನಲ್ಲಿ ಉತ್ತರ ಪ್ರದೇಶ ದೇಶದಲ್ಲೇ ಕುಖ್ಯಾತಿಯನ್ನು ಪಡೆದಿದೆ. ‘ಶಿಕ್ಷಣದ ಗುಣಮಟ್ಟದಲ್ಲಿ ದೇಶದಲ್ಲೇ ಕೊನೆಯ ಸ್ಥಾನವನ್ನು ಪಡೆದಿದೆ’ ಎಂದು ನೀತಿ ಆಯೋಗದ ವರದಿ ಹೇಳುತ್ತಿದೆ. ದಲಿತರ ಮೇಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳೂ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿವೆ. ಇದೀಗ ಸಂಘಪರಿವಾರ ಮುಖಂಡ, ಕಮಲೇಶ್ ತಿವಾರಿಯ ಕಗ್ಗೊಲೆ ಉತ್ತರ ಪ್ರದೇಶ ಮಾತ್ರವಲ್ಲ, ಅದರಾಚೆಗಿನ ಜನರಲ್ಲ್ಲೂ ಭಯ ಆತಂಕಗಳನ್ನು ಬಿತ್ತ ತೊಡಗಿದೆ.

ಕಮಲೇಶ್ ತಿವಾರಿಯ ಹತ್ಯೆಯ ತನಿಖೆ ನಡೆಯುವ ಮೊದಲೇ ಆರೋಪಿಗಳನ್ನು ಘೋಷಿಸಲಾಗಿದೆ. ಕಮಲೇಶ್ ತಿವಾರಿ ಈ ಹಿಂದೆ ಪ್ರವಾದಿ ಮುಹಮ್ಮದರ ಕುರಿತಂತೆ ಕೆಟ್ಟ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೊಳಗಾಗಿದ್ದರು. ಅಂದು ಅದನ್ನು ವಿರೋಧಿಸಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಕೆಲವು ದುಷ್ಕರ್ಮಿಗಳು ತಿವಾರಿಯ ಹತ್ಯೆಯ ಬೆದರಿಕೆಯನ್ನೂ ಒಡ್ಡಿದ್ದರು. ಇದೀಗ ತಿವಾರಿಯ ಹತ್ಯೆಯನ್ನು ನೇರವಾಗಿ ಆ ಪ್ರಕರಣಕ್ಕೆ ತಳಕು ಹಾಕುವ ಸಂಚೊಂದು ನಡೆಯುತ್ತಿದೆ. ಅಷ್ಟೇ ಅಲ್ಲ, ತಿವಾರಿಯ ಹತ್ಯೆಯನ್ನು ದೇಶದ ಇಡೀ ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ, ಪ್ರವಾದಿಯವರನ್ನು ತೀರಾ ಕೆಟ್ಟ ಭಾಷೆಯಲ್ಲಿ ನಿಂದಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ ಇದರ ವಿರುದ್ಧ ಪೊಲೀಸ್ ವ್ಯವಸ್ಥೆ ಮತ್ತು ಆದಿತ್ಯನಾಥ್ ಸರಕಾರ ನಿಗೂಢ ವೌನವನ್ನು ತಾಳಿದೆ. ತಿವಾರಿ ಕೊಲೆಯ ಮೂಲಕ ದುಷ್ಕರ್ಮಿಗಳು ಹಲವು ಗುರಿಯನ್ನು ಏಕಕಾಲದಲ್ಲಿ ಸಾಧಿಸುವ ಉದ್ದೇಶ ಹೊಂದಿದ್ದಾರೆ. ಒಂದು, ತಮಗೆ ಸಮಸ್ಯೆಯಾಗಿದ್ದ ತಿವಾರಿಯನ್ನು ಇಲ್ಲವಾಗಿಸುವುದು. ಎರಡನೆಯದು, ಹೇಗೂ ಮುಸ್ಲಿಂ ವಿರೋಧಿ ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದುದರಿಂದ ತಿವಾರಿಯ ಕೊಲೆಯ ಆರೋಪ ಮುಸ್ಲಿಮರ ತಲೆಗೆ ಬರುತ್ತದೆ.

ಮೂರನೆಯದು, ಉಪಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಕೊಲೆಯನ್ನು ಕೋಮುಗಲಭೆಗಳಿಗೆ ಬಳಸಿಕೊಳ್ಳುವುದು. ಪ್ರವಾದಿಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ನಿಂದನೆಗಳು ಕೋಮುಗಲಭೆ ಸೃಷ್ಟಿಸುವ ನೇರ ಉದ್ದೇಶವನ್ನು ಹೊಂದಿದೆ. ತಿವಾರಿಯನ್ನು ಯಾರು ಕೊಂದಿರಬಹುದು ಎನ್ನುವುದನ್ನು ಅನುಮಾನಿಸುವ ಅಧಿಕಾರ ಯಾರಿಗಾದರೂ ಇದ್ದರೆ, ಅದು ಅವರ ಕುಟುಂಬಸ್ಥರಿಗೆ ಮಾತ್ರ. ತಿವಾರಿಯ ತಾಯಿ ಈಗಾಗಲೇ ಈ ಕೊಲೆಯ ಹಿಂದೆ ಬಿಜೆಪಿಯ ನಾಯಕನೊಬ್ಬನಿದ್ದಾನೆ ಎನ್ನುವುದನ್ನು ಮಾಧ್ಯಮಗಳಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದಾರೆ. ತನ್ನ ಮಗನ ಕೊಲೆ ಪೂರ್ವ ಯೋಜಿತ ಎಂದು ಅವರು ಹೇಳಿದ್ದಾರೆ. ಇದರ ಹಿಂದೆ ಸರಕಾರದ ಕೆಲವು ಗಣ್ಯರು ಇರುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಅನುಮಾನಗಳಿಗೆ ಕಾರಣಗಳೂ ಇದ್ದವು. ತಿವಾರಿಗೆ ನೀಡಲ್ಪಟ್ಟ ಭದ್ರತೆಯನ್ನು ಸ್ಥಳೀಯಾಡಳಿತ ಹಂತಹಂತವಾಗಿ ಹಿಂದೆಗೆದುಕೊಂಡಿತ್ತು. ತಿವಾರಿಗೆ ಜೀವಬೆದರಿಕೆ ಬರುತ್ತಿರುವುದರ ಕುರಿತಂತೆ ಕುಟುಂಬ ಹಲವು ಬಾರಿ ದೂರುಗಳನ್ನು ನೀಡಿದ್ದರೂ, ಈ ಬಗ್ಗೆ ಪೊಲೀಸ್ ಇಲಾಖೆ ಗಾಢ ನಿರ್ಲಕ್ಷವನ್ನು ವಹಿಸಿತ್ತು. ಸ್ಥಳೀಯ ಬಿಜೆಪಿ ಮುಖಂಡರಿಗೂ ತಿವಾರಿಯವರಿಗೂ ವೈಮನಸ್ಯವಿದ್ದುದನ್ನು ತಿವಾರಿಯವರ ತಾಯಿ ಕುಸುಮ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ತಿವಾರಿ ಜೀವಕ್ಕೆ ಬೆದರಿಕೆಯೊಡ್ಡಿದ್ದ ಬಿಜೆಪಿ ನಾಯಕ ಶಿವಕುಮಾರ ಗುಪ್ತಾನ ಮೇಲೆ 500ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅವರು ಹೇಳಿದ್ದಾರೆ.ಆದರೂ ಪೊಲೀಸ್ ಇಲಾಖೆ ಈವರೆಗೆ ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸುವ ಸಾಹಸಕ್ಕೆ ಇಳಿದಿಲ್ಲ. ‘‘ನನ್ನ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಪರೇಡ್ ನಡೆಸಿ ಅಮಾಯಕರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ’’ ಎಂದೂ ಅವರು ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿಸಿ ಟಿವಿಯಲ್ಲಿರುವ ಸಾಕ್ಷಗಳು ಅವರ ಹೇಳಿಕೆಗೆ ಪೂರಕವಾಗಿವೆ. ಸಿಸಿಟಿವಿಯಲ್ಲಿ ಹಂತಕರು ಕೇಸರಿ ಧಿರಿಸುಗಳನ್ನು ಧರಿಸಿದ್ದರು. ಜೊತೆಗೆ ಮಹಿಳೆಯೂ ಒಬ್ಬಳಿದ್ದಳು. ಎಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ, ‘ಬಿಜೆಪಿಯ ನಾಯಕರಿಂದ ನನಗೆ ಜೀವಬೆದರಿಕೆ ಇದೆ’’ ಎನ್ನುವುದನ್ನು ಸ್ವತಃ ತಿವಾರಿಯವರೇ ಲೈವ್ ವೀಡಿಯೊ ಒಂದರಲ್ಲಿ ತಿಳಿಸಿದ್ದರು. ಯೋಗಿ ಸರಕಾರ ಅಧಿಕಾರಕ್ಕೆ ಬಂದ ಬೆನ್ನಿಗೇ ತಿವಾರಿಯವರ ಭದ್ರತೆಯನ್ನು ಹಿಂದೆಗೆಯಲಾಗಿತ್ತು. ಅದನ್ನೂ ಅವರು ಹೇಳಿಕೊಂಡಿದ್ದರು. ದುಷ್ಕರ್ಮಿಗಳ ಕುರಿತಂತೆ ಇಷ್ಟೆಲ್ಲ ಮಾಹಿತಿಗಳಿದ್ದರೂ, ಕೆಲವು ಮುಸ್ಲಿಮರನ್ನು ವಶಕ್ಕೆ ತೆಗೆದುಕೊಂಡು, ಮಾಧ್ಯಮಗಳಲ್ಲಿ ಪ್ರಕರಣಕ್ಕೆ ಕೋಮುಬಣ್ಣ ಬಳಿಯಲು ಸರಕಾರ ಮತ್ತು ಪೊಲೀಸರು ಜೊತೆಯಾಗಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಂಘಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರನ್ನು ಪ್ರಚೋದಿಸುವ ಕೆಲಸದಲ್ಲೂ ತೊಡಗಿದ್ದಾರೆ.

ತಿವಾರಿ ಹತ್ಯೆಯಲ್ಲಿ ಒಂದು ವೇಳೆ ಯಾವನೇ ಮುಸ್ಲಿಂ ಸಮುದಾಯಕ್ಕೆ ಸೇರಿದ ದುಷ್ಕರ್ಮಿಗಳು ಭಾಗವಹಿಸಿದ್ದರೆ ಅವರನ್ನು ಬಂಧಿಸಬೇಕು ಮತ್ತು ಮರಣದಂಡನೆ ವಿಧಿಸಬೇಕು. ಪ್ರವಾದಿಯನ್ನು ನಿಂದಿಸಿದ ಎನ್ನುವ ಕಾರಣಕ್ಕಾಗಿ ಯಾರೇ ಈ ಕೃತ್ಯವನ್ನು ಸಮರ್ಥಿಸಿದರೆ ಅವರನ್ನೂ ಜೈಲಿಗೆ ತಳ್ಳಬೇಕು. ಇದೇ ಸಂದರ್ಭದಲ್ಲಿ ತಿವಾರಿ ಕುಟುಂಬ ನೀಡಿರುವ ಮಾಹಿತಿಯ ಆಧಾರದಲ್ಲಿ ಪೊಲೀಸರು ಗಂಭೀರ ತನಿಖೆ ನಡೆಸುವ ಅಗತ್ಯವಿದೆ. ಆರೋಪಿಗಳ ಬಂಧನವಾಗುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡುವವರನ್ನು ಗುರುತಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಯಾವುದೇ ಅಪ ಪ್ರಚಾರ, ವದಂತಿ, ದ್ವೇಷದ ಹೇಳಿಕೆಗಳಿಗೆ ಬಲಿಯಾಗದೆ ಸರ್ವರೂ ಮುತ್ಸದ್ದಿತನವನ್ನು ಪ್ರದರ್ಶಿಸಬೇಕು. ಪ್ರವಾದಿಯ ಕುರಿತ ಯಾವುದೇ ನಿಂದನೆಗಳಿಗೂ ಪ್ರತಿಕ್ರಿಯಿಸದೇ, ‘ಕೆಡುಕನ್ನು ಒಳಿತಿನಿಂದ ಎದುರಿಸಿ’ ಎಂಬ ಪ್ರವಾದಿಯವರ ಸಂದೇಶವನ್ನು ಪಾಲಿಸಬೇಕು. ಈ ಮೂಲಕ ದುಷ್ಕರ್ಮಿಗಳು ಕೋಮುಗಲಭೆ ನಡೆಸುವ, ನಿಜವಾದ ಅಪರಾಧಿಗಳನ್ನು ರಕ್ಷಿಸುವ ಸಂಚನ್ನು ವಿಫಲಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News