ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅನ್ಯ ಸಮುದಾಯದ ವ್ಯಕ್ತಿಗಳ ನೇಮಕ ಬ್ಯಾರಿ ಸಂಸ್ಕೃತಿಗೆ ಅವಮಾನ

Update: 2019-10-21 13:09 GMT

ಬೆಂಗಳೂರು, ಅ. 21: ರಾಜ್ಯದ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿಗಳಿಗೆ ರಾಜ್ಯ ಸರಕಾರ ಅರ್ಹರಲ್ಲದ ಹಾಗೂ ಸಂಬಂಧಪಡದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಿದ್ದು, ಅಕಾಡೆಮಿಗಳಲ್ಲಿ ಪ್ರತಿಷ್ಠೆ ರಾಜಕಾರಣದಿಂದ ರಾಜ್ಯ ಸರಕಾರ ಅಪಹಾಸ್ಯಕ್ಕೀಡಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಲೇವಡಿ ಮಾಡಿದ್ದಾರೆ.

ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಬ್ಯಾರಿ ಸಮುದಾಯಕ್ಕೆ ಸೇರದ ಮತ್ತು ಬ್ಯಾರಿ ಭಾಷೆಯ ಗಂಧ-ಗಾಳಿ ತಿಳಿಯದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಿರುವ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿರುವ ಇಲ್ಯಾಸ್, ಕನ್ನಡ ಗೊತ್ತಿಲ್ಲದ ಮರಾಠಿಗರನ್ನು ಕನ್ನಡ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಕ ಮಾಡಿದರೆ ಎಂತಹ ವಿರೋಧಾಭಾಸ ಹಾಗೂ ಕುಚೋದ್ಯವಾಗುತ್ತದೆಯಲ್ಲವೇ? ಅದೇ ರೀತಿ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸರಕಾರ ಇಬ್ಬರು ಮಹಿಳೆಯರ ಸಹಿತ ಬ್ಯಾರಿಯೇತರ ಸಮುದಾಯದ ವ್ಯಕ್ತಿಗಳನ್ನು ನೇಮಕ ಮಾಡಿರುವುದು ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.

ಅದೇ ರೀತಿ ತುಳು ಸಾಹಿತ್ಯ ಅಕಾಡೆಮಿಗೂ ತುಳು ಸಾಹಿತ್ಯಕ್ಕೆ ಅರ್ಹರಲ್ಲದ ವ್ಯಕ್ತಿಗಳನ್ನು ನೇಮಕ ಮಾಡಿ ಯೋಗ್ಯರಿಗೆ ಅವಕಾಶ ತಿರಸ್ಕರಿಸಲಾಗಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲೂ ಕ್ರೈಸ್ತ ಕೊಂಕಣಿಗಳಿಗೆ ಅವಕಾಶವನ್ನು ನಿರಾಕರಿಸಲಾಗಿದೆ. ಇಷ್ಟೆಲ್ಲಾ ಕುಚೋದ್ಯಗಳಿಗೆ ಪೂರಕವಾಗುವಂತೆ ಬ್ಯಾರಿ, ತುಳು, ಕೊಂಕಣಿ ಸಾಹಿತ್ಯ ಅಕಾಡೆಮಿಗಳ ನೂತನ ಸದಸ್ಯರಾಗಿ ಸರಕಾರದಿಂದ ನೇಮಕ ಮಾಡಿಕೊಂಡವರು ಸರಣಿ ರಾಜೀನಾಮೆ ನೀಡುತ್ತಿರುವುದು ರಾಜ್ಯ ಸರಕಾರದ ತಪ್ಪು ಧೋರಣೆಗೆ ಹಿಡಿದ ಕನ್ನಡಿ.

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮತ್ತು ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಿಸುವಂತೆ ಹೆಸರು ಸೂಚಿಸಿದ ಜಿಲ್ಲೆಯ ಶಾಸಕರುಗಳು ಈ ಅಸಂಬದ್ಧತೆಯ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು. ಅಕಾಡೆಮಿಗಳು ಆಯಾಯ ಸಾಹಿತ್ಯ-ಸಂಸ್ಕೃತಿಯ ವಿಕಾಸ ಹಾಗೂ ವೈಭವಕ್ಕೆ ವೇದಿಕೆಗಳಾಗಬೇಕೇ, ಹೊರತು ಸರಕಾರ ಹಾಗೂ ರಾಜಕೀಯ ಪಕ್ಷಗಳ ಪ್ರತಿಷ್ಠೆಯನ್ನು ಸಾಬೀತುಪಡಿಸುವ ರಣರಂಗವಾಗಬಾರದು ಎಂದು ಅವರು ತಿಳಿಸಿದ್ದಾರೆ.

ಪಕ್ಷ ಭೇದವಿಲ್ಲದೆ ಸಾಹಿತ್ಯ, ಸಂಗೀತ, ಸಂಸ್ಕೃತಿಗಳಿಗೆ ಕೊಡುಗೆ ನೀಡುವ ವ್ಯಕ್ತಿತ್ವಗಳನ್ನೆ ಇಂತಹ ಸಾಹಿತ್ಯ ಅಕಾಡೆಮಿಗಳಿಗೆ ನೇಮಿಸಿ ರಾಜ್ಯದ ವೈವಿಧ್ಯಮಯ ಸಂಸ್ಕೃತಿಯನ್ನು ಬೆಳೆಸಿ, ಪ್ರೋತ್ಸಾಹಿಸಬೇಕು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News