ಬಡವರಿಗೆ ಗುಣಮಟ್ಟದ ಸೇವೆ ಒದಗಿಸದಿದ್ದರೆ ಸರಕಾರಿ ಆಸ್ಪತ್ರೆಗಳಿಗೆ ಭವಿಷ್ಯವಿಲ್ಲ: ಆರೋಗ್ಯ ಸಚಿವ ಶ್ರೀರಾಮುಲು

Update: 2019-10-21 16:15 GMT

ಬೆಂಗಳೂರು, ಅ. 21: ಸರಕಾರಿ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ಕಂಪೆನಿಗಳಿಗೆ ನೀಡುವಂತೆ ಒತ್ತಾಯ ಬರುತ್ತಿದೆ. ಆದರೆ, ಬಡಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸದಿದ್ದರೆ ನಮಗೆ ಭವಿಷ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಚಿವರು, ಸರಕಾರ ಬದಲಾಗಬಹುದು. ಆದರೆ, ಇಲಾಖೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸುವವರು ನೀವು. ಇಲಾಖೆ ಕೆಳಮಟ್ಟದಿಂದ ಬದಲಾವಣೆ ಆಗಬೇಕು ಎಂದರು.

ಇಲಾಖೆಯಲ್ಲಿ ಹಣಕಾಸಿನ ಕೊರತೆ ಇಲ್ಲ. ಆದರೆ, ಅದು ಸದ್ಬಳಕೆ ಆಗಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಆದ್ಯತೆ ನೀಡಬೇಕು ಎಂದು ಶ್ರೀರಾಮುಲು ಇದೇ ವೇಳೆ ಸಲಹೆ ಮಾಡಿದರು.

ಮಾದರಿ ಆರೋಗ್ಯ ಕೇಂದ್ರ: ಜಿಲ್ಲಾವಾರು ಹಂಚಿಕೆ ಮಾಡಿರುವ ಅನುದಾನದ ಪೈಕಿ ಶೇ.90ರಷ್ಟು ಬಳಕೆ ಮಾಡಬೇಕು. ಆ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಹೆಚ್ಚು ಮೊತ್ತ ಬಳಕೆ ಮಾಡಿದೆ ಎಂದ ಅವರು, ಆರೋಗ್ಯಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಕನಿಷ್ಠ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಿ ಅವುಗಳನ್ನು ಮಾದರಿ ಕೇಂದ್ರಗಳಾಗಿ ಅಭಿವೃದ್ದಿ ಪಡಿಸಬೇಕು ಎಂದು ಸೂಚಿಸಿದರು.

ಬಹುಮಾನ: ಮಾದರಿ ಪ್ರಾಥಮಿಕ ಕೇಂದ್ರಗಳಿಗೆ 3ಲಕ್ಷ ರೂ., 2 ಲಕ್ಷ ರೂ. ಹಾಗೂ 1 ಲಕ್ಷ ರೂ.ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಆ ಮೂಲಕ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸರಕಾರ ಮುಂದಾಗಿದೆ ಎಂದು ಶ್ರೀರಾಮುಲು ಹೇಳಿದರು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಂತಹ ಮಹತ್ವಕಾಂಕ್ಷೆ ಯೋಜನೆ ಸಮರ್ಪಕವಾಗಿ ಜಾರಿಗೆ ಇಲಾಖೆಯ ಪ್ರತಿಯೊಬ್ಬರು ಶ್ರಮಿಸಬೇಕು ಎಂದ ಅವರು, ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಬಹುತೇಕ ಬಡ-ಮಧ್ಯಮ ವರ್ಗದವರ ಆರೋಗ್ಯ ಸಮಸ್ಯೆಗೆ ಸ್ಪಂದಿಸಿದಂತೆ ಆಗುತ್ತದೆ ಎಂದು ಅವರು ನಿರ್ದೇಶನ ನೀಡಿದರು.

ಯೋಜನೆ ಜಾರಿಯಾದ ದಿನದಿಂದ ಈ ವರೆಗೆ 77ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‌ದಾರರನ್ನು ನಿರ್ಲಕ್ಷಿಸುತ್ತಿವೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಶೀಘ್ರವೇ ಸಭೆ ನಡೆಸಿ, ಸೂಚನೆ ನೀಡಲಾಗುವುದು. ಒಂದು ವೇಳೆ ಪಾಲಿಸದಿದ್ದರೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

‘ಆಸ್ಪತ್ರೆಗಳಲ್ಲಿ ದೇವರ ಪ್ರಾರ್ಥನೆಯಿಂದ ಧನಾತ್ಮಕ ಶಕ್ತಿ(ಪಾಸಿಟಿವ್ ಎನರ್ಜಿ) ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಸರ್ವಧರ್ಮ ಪ್ರಾರ್ಥನಾ ಸ್ಥಳ ನಿರ್ಮಿಸುವ ಮೂಲಕ ರೋಗಿಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News