ನಮ್ಮನ್ನು ಖರೀದಿಸಲು ನಾವೇನು ದನ, ಕುರಿ, ಕೋಳಿಗಳಲ್ಲ: ಅನರ್ಹ ಶಾಸಕ ಬಿ.ಸಿ.ಪಾಟೀಲ್

Update: 2019-10-21 16:18 GMT

ಮೈಸೂರು,ಅ.21: ನಮ್ಮನ್ನು ಖರೀದಿಸಲು ನಾವೇನು ದನ, ಕುರಿ, ಕೋಳಿಗಳಲ್ಲ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮಾಜಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. 

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ದನ, ಕುರಿ, ಕೋಳಿಗಳಂತೆ ಬಿಜೆಪಿಯವರು ಖರೀದಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮನ್ನ ಖರೀದಿಸಲು ನಾವೇನು ದನ, ಕುರಿ, ಕೋಳಿಗಳಲ್ಲ. ಮಾರಾಟ, ಖರೀದಿ ಬಗ್ಗೆ ಸಿದ್ದರಾಮಯ್ಯಗೆ ಏನು ಗೊತ್ತು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಹೇಗೆ ನಡೆಸಿಕೊಂಡರು ಅನ್ನೋದನ್ನ ನೋಡಲಿ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿದ್ದರೆ 14 ಮಂದಿ ಪಕ್ಷದಿಂದ ಹೊರಬರುವ ಅಗತ್ಯವೇನಿತ್ತು. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಹೇಗೆ ನಡೆದುಕೊಂಡರು ಅನ್ನೋದು ಎಲ್ಲರಿಗೂ ಗೊತ್ತಿದೆ. ಇನ್ನು, ಕುಮಾರಸ್ವಾಮಿ ಅವರಂತು ಕುಟುಂಬಕ್ಕೆ ಮಾತ್ರ ಸೀಮಿತರಾದರು. ಪಕ್ಷದಲ್ಲಿ ನಮ್ಮ ಕಷ್ಟ, ಸುಖ ಕೇಳುವವರೇ ಇರಲಿಲ್ಲ. ಹಾಗಾಗಿ ನಾವೆಲ್ಲ ಧೃಡ ತೀರ್ಮಾನ ಮಾಡಬೇಕಾಯಿತು. ಈಗಲೂ ಸಹ ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ. ಪರಿಸ್ಥಿತಿಯನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂದು ತಿಳಿಸಿದರು.

ನಾಳೆ ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಹೊರ ಬೀಳುವ ವಿಶ್ವಾಸವಿದೆ. 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿಲುವು ಸಂವಿಧಾನ ಬಾಹಿರ. ಸ್ಪೀಕರ್ ನೈಸರ್ಗಿಕವಾಗಿ ನ್ಯಾಯ ಕೊಟ್ಟಿಲ್ಲ. ಇದೇ ಕಾರಣದಿಂದಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ನಾಳೆ ತೀರ್ಪು ಹೊರ ಬೀಳುತ್ತಿರುವುದರಿಂದ ಬಹುತೇಕ ಅನರ್ಹ ಶಾಸಕರು ದೆಹಲಿಗೆ ಹೋಗಲಿದ್ದಾರೆ. ಆದರೆ ನನ್ನ ಸ್ವಕ್ಷೇತ್ರದಲ್ಲಿ ಭಾರೀ ಮಳೆಯಾಗಿ ಹಾನಿ ಸಂಭವಿಸಿದೆ. ಹಾಗಾಗಿ ನಾನು ದೆಹಲಿಗೆ ಹೋಗುತ್ತಿಲ್ಲ. ಮೈಸೂರಿನಿಂದ ನೇರವಾಗಿ ನನ್ನ ಸ್ವಕ್ಷೇತ್ರಕ್ಕೆ ಹೋಗುತ್ತೇನೆ. ಉಪ ಚುನಾವಣೆಯಲ್ಲಿ ನಾನು ಖಂಡಿತ ಗೆಲ್ಲುತ್ತೇನೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News