'ಸಾವರ್ಕರ್ ಗೆ ಭಾರತರತ್ನ' ದೇಶದ ಭವ್ಯ ಇತಿಹಾಸಕ್ಕೆ ಅಪಚಾರ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು

Update: 2019-10-21 16:23 GMT

ಮೈಸೂರು,ಅ.21: ಮಾತೃಭೂಮಿಗೆ ದ್ರೋಹಬಗೆದ ಸಾವರ್ಕರ್ ಅಂತಹವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದರಿಂದ ದೇಶದ ಭವ್ಯ ಇತಿಹಾಸಕ್ಕೆ ಅಪಚಾರವೆಸಗಿದಂತಾಗುತ್ತದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಸೋಮವಾರ ಇನ್‍ಸ್ಪೈರ್ಡ್ ಇಂಡಿಯನ್ ಫೌಂಡೇಶನ್‍ನ 'ಜಿ.ಶಾಂತಾ ಟೀಚರ್ಸ್ ಪತ್ರಿಕೋದ್ಯಮ ಪ್ರಶಸ್ತಿ' ಪುರಸ್ಕೃತರಾದ ಯುವ ಪತ್ರಕರ್ತ ಎಂ.ನಂಜುಂಡಸ್ವಾಮಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗಾಂಧಿ, ಪಟೇಲ್, ಸುಭಾಷ್‍ಚಂದ್ರ ಬೋಸ್, ನೆಹರೂ ಸೇರಿದಂತೆ ಹಲವರು ಸಂಘಟಿಸಿದ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸದೇ ಬ್ರಿಟಿಷರಿಗೆ ಶರಣಾಗಿ ಅವರಿಂದ ಭತ್ಯೆ ಪಡೆದು ತಮ್ಮ ಸ್ವಾರ್ಥಕ್ಕಾಗಿ ಮಾತೃಭೂಮಿಗೆ ಪುರೋಹಿತಶಾಹಿ ನೇತೃತ್ವದ ಹೆಗಡೆವಾರ್, ಸಾವರ್ಕರ್, ಗೋಲ್ವಾಲ್‍ಕರ್ ದ್ರೋಹ ಬಗೆದರು. ಅವರನ್ನು ಅಪ್ರತಿಮ ದೇಶಭಕ್ತರೆಂದು ಬಿಂಬಿಸಿ ಅವರ ಪೈಕಿ ಸಾವರ್ಕರ್ ಗೆ ಭಾರತರತ್ನ ಪ್ರಶಸ್ತಿ ನೀಡಲು ಹೊರಟಿರುವುದು ಸಾಮ್ರಾಜ್ಯಶಾಹಿ ಮತ್ತು ಕೋಮುವಾದಿ ಶಕ್ತಿಗಳ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಹರೂ, ಇಂದಿರಾ ಮೊದಲಾದವರು 'ಗರೀಬೀ ಹಠಾವೋ' ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿ ಬಡತನ ನಿರ್ಮೂಲನೆಗೆ ಮುಂದಾದರೆ, ಇಂದು ಭಾರತವನ್ನು ಆಳುತ್ತಿರುವ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರ 'ಗರಿಬೋಂಕೋ ಹಠಾವೋ' ಎಂಬಂತೆ ಬಡವರ ನಿರ್ಮೂಲನ ಕಾರ್ಯಕ್ಕೆ ಮುಂದಾಗಿರುವುದು ದುರದೃಷ್ಟಕರ ಸಂಗತಿಯೆಂದು ಅವರು ವಿಷಾಧಿಸಿದರು. 

ಭಾರತದ ಆರ್ಥಿಕತೆ ಕುಸಿಯುತ್ತಿದ್ದು, ಸಾಂವಿಧಾನಿಕ ಸಂಸ್ಥೆಗಳು ದುರ್ಬಲಗೊಂಡು ಭಾರತೀಯ ಪ್ರಜಾಸತ್ತೆ ಶ್ರೀಮಂತ ಪ್ರಭುತ್ವದ ನಿಯಂತ್ರಣಕ್ಕೆ ಒಳಪಟ್ಟಿರುವುದು ಅಪಾಯಕಾರಿ ಬೆಳವಣಿಗೆಯೆಂದು ಹೇಳಿದರು.

ಹೆಸರಾಂತ ವಿಜ್ಞಾನಿ ಡಾ.ಜಗನ್ನಾಥ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಣೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬನ್ನೂರು ಕೆ.ರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಪತ್ರಕರ್ತ ವಿನೋದ್ ಮಹದೇವಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News