ಕೆ.ಬಿ.ಸಿದ್ದಯ್ಯನವರ ಕಾವ್ಯ ದಲಿತ ಕಾವ್ಯದ ಮೈಲಿಗಲ್ಲು: ಅರವಿಂದ ಮಾಲಗತ್ತಿ

Update: 2019-10-21 16:25 GMT

ಮೈಸೂರು,ಅ.21: ಖಂಡ ಕಾವ್ಯ ಶೈಲಿಯ ಕೆ.ಬಿ.ಸಿದ್ದಯನವರ ಕಾವ್ಯಗಳು ದಲಿತ ಕಾವ್ಯದ ಮೈಲಿಗಲ್ಲು ಎಂದು ಹಿರಿಯ ಸಾಹಿತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದರು. 

ಮಾನಸ ಗಂಗೋತ್ರಿಯ ಗಾಂಧಿಭವನದಲ್ಲಿ ಬಹುಲೇಕ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಇತ್ತೀಚೆಗೆ ನಿಧನರಾದ ದಲಿತ ಕವಿ ಕೆ.ಬಿ.ಸಿದ್ದಯ್ಯನವರ ನುಡಿನಮನ ಸಭೆಯಲ್ಲಿ ಮಾತನಾಡಿದ ಅವರು 'ಖಂಡಕಾವ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಸಿದ್ದಯ್ಯನವರು ಈ ದಿಸೆಯಲ್ಲಿ ವಚನ ಸಾಹಿತ್ಯವನ್ನೇ ಅಧಿಕೃತವಾಗಿ ನೆಚ್ಚಿಕೊಂಡು ವಚನ ಸಾಹಿತ್ಯದ ಶಕ್ತಿಯನ್ನು ದಲಿತ ಸಾಹಿತ್ಯದ ಪರಿಭಾಷೆಯಾಗಿ ಪುನರ್ ಬಳಸಿಕೊಂಡರು' ಎಂದರು. 

ಅಲ್ಲಮ ಪ್ರಭುವಿನ ಬಗ್ಗೆ ಎಲ್ಲಿಲ್ಲದ ಪ್ರೀತಿ ಹೊಂದಿದ್ದ ಕೆ.ಬಿ.ಸಿದ್ದಯ್ಯನವರು ಬಕಾಲ, ಅನಾತ್ಮ, ಗಲ್ಲೇಬಾನಿ, ದಕ್ಲಾ ಕಥಾದೇವಿ ಕಾವ್ಯ ಹೀಗೆ ತಮ್ಮ ನಾಲ್ಕು ಖಂಡಕಾವ್ಯಗಳಲ್ಲಿ ವಚನ ಸಾಹಿತ್ಯದ ನಿರೂಪಣಾ ಶೈಲಿ ಅನುಸರಿಸಿದರು. ದುರಂತವೆಂದರೆ ಅವರ ಕಾವ್ಯದ ಈ ಶೈಲಿ ಕುರಿತು ಹೆಚ್ಚು ಚರ್ಚೆ ನಡೆದಿಲ್ಲ. ಹೀಗಿದ್ದರೂ ಸಿದ್ದಯ್ಯನವರ ಕಾವ್ಯ ದಲಿತ ಕಾವ್ಯದ ಸಂದರ್ಭದಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲುತ್ತದೆ ಎಂದು ಪ್ರೊ.ಮಾಲಗತ್ತಿ ತಿಳಿಸಿದರು.

ಕೆ.ಬಿ.ಸಿದ್ದಯ್ಯನವರ ಕಾವ್ಯವನ್ನು ಮುಳ್ಳೂರು ನಾಗರಾಜರವರ ಕಾವ್ಯದೊಡನೆ ಹೋಲಿಸಿದ ಮಾಲಗತ್ತಿಯವರು ಮುಳ್ಳೂರರ ಕಾವ್ಯ ಆಡುಮಾತಿನ ಶೈಲಿ ಮೂಲಕ ಬದುಕಿನ ನೇರ ಅನುಭವಗಳನ್ನು ಕಟ್ಟಿಕೊಟ್ಟರೆ ಸಿದ್ದಯ್ಯನವರ ಕಾವ್ಯ ಪರೋಕ್ಷ ನಿರೂಪಣಾ ಶೈಲಿ ಅನುಸರಿಸುತ್ತದೆ ಎಂದರು. 

ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಕೆ.ಬಿ.ಸಿದ್ದಯ್ಯನವರ ಕಾವ್ಯ ಜನರಿಗೆ ವಿಶೇಷವಾಗಿ ಮೈಸೂರಿಗರಿಗೆ ಅಷ್ಟಾಗಿ ತಲುಪಿಲ್ಲ. ಅದನ್ನು ತಲುಪಿಸುವ ಕಾರ್ಯ ವಿಮರ್ಶಕರಿಂದ ನಡೆಯಬೇಕಿದೆ ಎಂದು ತಿಳಿಸಿದರು. 

ಕೇಂದ್ರದ ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕುಪ್ನಳ್ಳಿ ಕೆ.ಭೈರಪ್ಪ ಮಾತನಾಡಿ, ಮೈಸೂರು ವಿವಿಯಲ್ಲೇ ಎಂ.ಎ ಪದವಿ ಪಡೆದು ಮೈಸೂರಿನ ಬಗ್ಗೆ ಅದರಲ್ಲೂ ಕುವೆಂಪು ಮತ್ತು ತೇಜಸ್ವಿಯವರ ಬಗ್ಗೆ ಇನ್ನಿಲ್ಲದ ಪ್ರೀತಿ ಹೊಂದಿದ್ದ ಸಿದ್ದಯ್ಯನವರು ಈ ಹಿನ್ನೆಲೆಯಲ್ಲಿ ತಮ್ಮ ಪುತ್ರನಿಗೆ 'ಅನಿಕೇತನ' ಎಂದು ಹೆಸರಿಟ್ಟರು ಎಂಬುದನ್ನು ನೆನೆಪಿಸಿಕೊಂಡರು.

ಬಾರುಕೋಲು ಪತ್ರಿಕೆಯ ಬಿ.ಆರ್.ರಂಗಸ್ವಾಮಿ ಮತ್ತು ಅವರ ಪತ್ನಿ ಪದ್ಮಶ್ರೀ ರಂಗಸ್ವಾಮಿ, 70ರ ದಶಕದಲ್ಲಿ ದಲಿತ ಚಳುವಳಿಯ ಸಂದರ್ಭದಲ್ಲಿ ಕೆ.ಬಿ.ಸಿದ್ದಯ್ಯನವರ ರಚಿಸಿದ ಜನಪ್ರಿಯ ಕ್ರಾಂತಿಗೀತೆ “ಈ ನಾಡಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ...” ಹಾಡನ್ನು ಪ್ರಸ್ತುತ ಪಡಿಸಿದರು. 

ವೇದಿಕೆಯ ಅಧ್ಯಕ್ಷ ಪುನೀತ್ ಎನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾವ್ಯಾಸಕ್ತರಾದ ಯತಿರಾಜು ಬ್ಯಾಲಹಳ್ಳಿ, ಕಾಂತರಾಜು ಮೌರ್ಯ, ಬಿ.ಎಂ.ಲಿಂಗರಾಜು, ನಾರಾಯಣ, ಪ್ರವೀಣ್ ಮತ್ತಿತರರು ಭಾಗವಹಿಸಿದ್ದರು. ಸಭೆಯ ನಿರೂಪಣೆಯನ್ನು ಬಹುಲೇಕ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸಾಹಿತಿ ರಘೋತ್ತಮ ಹೊ.ಬ ರವರು ನಡೆಸಿಕೊಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News