ಧಾರವಾಡದಲ್ಲಿ ಭಾರಿ ಮಳೆ: ಕೆರೆ-ಕಟ್ಟೆ ತುಂಬಿ ಒಡೆಯದಂತೆ ಮುನ್ನೆಚ್ಚರಿಕೆ ವಹಿಸಿ- ಸಚಿವ ಜಗದೀಶ್ ಶೆಟ್ಟರ್

Update: 2019-10-21 16:45 GMT

ಧಾರವಾಡ, ಅ.21: ಕಳೆದ ಎರಡು, ಮೂರು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಕೆರೆ, ಕಟ್ಟೆಗಳು ತುಂಬಿವೆ. ಕೆರೆ ಒಡೆದು ಅಥವಾ ಕೋಡಿ ಬಿದ್ದು ಗ್ರಾಮಗಳಿಗೆ ನೀರು ನುಗ್ಗದಂತೆ ಮತ್ತು ಯಾವುದೇ ರೀತಿಯ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡು ನಿರಂತರವಾಗಿ ಗಮನಿಸಬೇಕು ಎಂದು ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿರ್ದೇಶನ ನೀಡಿದರು.

ಸೋಮವಾರ ನಗರದ ತಡಕೋಡ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 495 ಕೆರೆ, ಸಣ್ಣ ನೀರಾವರಿ ಇಲಾಖೆಯ 112 ಮತ್ತು ಸ್ಥಳೀಯವಾಗಿ ಗ್ರಾಮಪಂಚಾಯತ್‌ಗಳು ನಿರ್ವಹಿಸುವ ಕೆರೆಗಳು ಸೇರಿದಂತೆ ಅನೇಕ ಕೆರೆಗಳಿವೆ ಎಂದರು.

ತಡಕೋಡ ಕೆರೆಯು 110 ಎಕರೆ ವಿಸ್ತೀರ್ಣ ಹೊಂದಿದ್ದು, ಕಳೆದ ಎರಡು ದಿನಗಳ ಮಳೆಯಿಂದಾಗಿ 43 ಮಿಲಿಯನ್ ಘನ ಅಡಿ(ಎಂಸಿಎಫ್‌ಟಿ)ಯಷ್ಟು ನೀರು ಸಂಗ್ರಹವಾಗಿ ಪೂರ್ಣ ತುಂಬಿದೆ. ಇದು ನೀರಾವರಿ ಕೆರೆಯಾಗಿದ್ದು, ಪಕ್ಕದ ಖಾನಾಪೂರ, ತಡಕೋಡ ಮತ್ತು ಹಂಗರಕಿ ಗ್ರಾಮಗಳ ವ್ಯಾಪ್ತಿಯ ಸುಮಾರು 115 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿಗಾಗಿ ನೀರು ಪೂರೈಸುತ್ತದೆ ಎಂದು ಅವರು ತಿಳಿಸಿದರು. ಕೆರೆಯಲ್ಲಿ ಸಂಗ್ರಹವಾಗಿರುವ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಹಾಗೂ ಹೆಚ್ಚುವರಿ ನೀರಿನಿಂದ ತಡಕೋಡ ಗ್ರಾಮಕ್ಕೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕೆಂದು ಜಗದೀಶ್ ಶೆಟ್ಟರ್ ಹೇಳಿದರು.

ಕೆರೆಗಳ ನಿರ್ವಹಣೆ, ಪರಿಹಾರ ವಿತರಣೆ ಹಾಗೂ ಮಳೆ ಹಾನಿ ಕುರಿತು ಸಚಿವರಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ವಿವರಿಸಿದರು. ಶಾಸಕ ಅಮೃತ ದೇಸಾಯಿ ಗ್ರಾಮೀಣ ಭಾಗದ ಮನೆ ಹಾನಿ, ಬೆಳೆ ಹಾನಿ ಹಾಗೂ ರಸ್ತೆ, ಸೇತುವೆಗಳ ಹಾನಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಧಾರವಾಡ ತಾಲೂಕಿನ ಪ್ರಭಾರಿ ತಹಶೀಲ್ದಾರ್ ಜಿ.ಜಕ್ಕನಗೌಡರ, ಕಂದಾಯ ನಿರೀಕ್ಷಕ ಅಜಯ ಆಯಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭೀಮಸಿಂಗ್ ಓಲೆಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News