×
Ad

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ: ಹಲವು ರಸ್ತೆಗಳ ಸಂಪರ್ಕ ಕಡಿತ

Update: 2019-10-21 23:00 IST

ಚಿಕ್ಕಮಗಳೂರು, ಅ.21: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಭಾರೀ ಮಳೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ತುಂಬದಿದ್ದ ಹಲವು ಕೆರೆಗಳು ತುಂಬಿ ಕೋಡಿ ಬಿದ್ದಿದ್ದು, ರೈತರು ಸಂತಸಗೊಂಡಿದ್ದಾರೆ.

ಭಾನುವಾರ ಸಂಜೆಯ ನಂತರ ಜಿಲ್ಲೆಯಾದ್ಯಂತ ಮಳೆ ಆರಂಭಗೊಂಡು ರಾತ್ರಿಯಿಡೀ ಸುರಿಯಿತು. ಹಲವು ವರ್ಷಗಳಿಂದ ತುಂಬದಿದ್ದ ಶಿವನಿ, ಜಂಬದಹಳ್ಳಿ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಶಿವನಿ ಕೆರೆ ತುಂಬಿ ಸೇತುವೆಯ ಮೇಲೆ ನೀರು ಹರಿದ ಹಿನ್ನೆಲೆಯಲ್ಲಿ ಶಿವನಿ-ರಾಮಗಿರಿ, ಶಿವನಿ-ಬುಕ್ಕಾಂಬುದಿ, ಶಿವನಿ-ಅನುವನಹಳ್ಳಿ-ಅಜ್ಜಂಪುರದ ರಸ್ತೆಗಳ ಸಂಪರ್ಕ ಕಡಿತಗೊಂಡಿತ್ತು.

ಶಿವನಿ ಕೆರೆ ತುಂಬಿ ನೀರು ಹರಿದ ಪರಿಣಾಮ ಕಟಾವು ಮಾಡಿ ಇಡಲಾಗಿದ್ದ ಈರುಳ್ಳಿ ಬೆಳೆ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಎ.ರಂಗಾಪುರ ಗ್ರಾಮದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಗ್ರಾಮದ 10 ಮನೆಗಳಿಗೆ ನೀರು ನುಗ್ಗಿತ್ತು. ದಂದೂರು ಗ್ರಾಮದಲ್ಲಿಯೂ ನೀರು ಮನೆಯೊಳಗೆ ನುಗ್ಗಿದ್ದು, ಗ್ರಾಮಸ್ಥರು ಮೋಟಾರ್ ಪಂಪ್ ಬಳಸಿ ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರಗೆ ಬಿಟ್ಟರು.

ಭಾರೀ ಮಳೆ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನೀರು ಕಾಣದಿದ್ದ ವೇದಾವತಿ ನದಿಗೂ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಹಲವು ವರ್ಷಗಳ ನಂತರ ವೇದಾವತಿ ನದಿಯು ತುಂಬಿ ಹರಿದಿದೆ.

ಕಡೂರು ತಾಲೂಕಿನಲ್ಲಿಯೂ ರಾತ್ರಿಯಿಡಿ ಮಳೆ ಸುರಿದಿದೆ. ತಾಲೂಕಿನ ನರಸೀಪುರ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಸೋಮವಾರ ಬೆಳಗ್ಗೆ ಕೊಟ್ಟಿಗೆಯೊಂದು ಕುಸಿದು ಬಿದ್ದಿದೆ. ಕೂಡಲೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಕೊಟ್ಟಿಗೆಯಲ್ಲಿದ್ದ ದನ ಕರುಗಳನ್ನು ರಕ್ಷಿಸಿದ್ದಾರೆ.

ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳು ತುಂಬಿರುವುದರಿಂದ ರೈತರು ತೀವ್ರ ಸಂತಸಗೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನಲ್ಲಿಯೂ ಉತ್ತಮ ಮಳೆಯಾಗಿದೆ. ನಗರ, ಗಿರಿಶ್ರೇಣಿ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಆರಂಭಗೊಂಡ ಮಳೆ ಬೆಳಗ್ಗೆ 9 ಗಂಟೆಯವರೆಗೂ ಸತತವಾಗಿ ಸುರಿಯಿತು. ನಗರದಲ್ಲಿ ಅಮೃತ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಹಲವೆಡೆಗಳಲ್ಲಿ ನೀರು ನುಗ್ಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು. ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ಮತ್ತು ಮೂಡಿಗೆರೆ ತಾಲೂಕುಗಳಲ್ಲಿಯೂ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News