ಮೈಸೂರು: ಬಿಇಎಂಎಲ್ ಖಾಸಗೀಕರಣ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರ ಪ್ರತಿಭಟನೆ

Update: 2019-10-21 17:40 GMT

ಮೈಸೂರು,ಅ.21: ಬಿಇಎಂಎಲ್ ಅನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನೌಕರರ ಸಂಘ ಹಾಗೂ ಕಾರ್ಮಿಕರು ಕಾರ್ಖಾನೆಯ ಮುಂಭಾಗ ಪ್ರತಿಭಟನೆ ನಡೆಸಿ ಬಂಡವಾಳಶಾಹಿ ಹಾಗೂ ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿಯವರಿಗೆ ಈ ಉದ್ಯಮದ ಶೇ.26ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೀಗ ಸರ್ಕಾರದ ಬಳಿ ಇರುವ ಎಲ್ಲ ಶೇ.54ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಮುಂದಾಗಿದೆ. ಇಡೀ ಸಂಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆಸಿದೆ ಎಂದು ಆಕ್ರೋಶ ಹೊರಹಾಕಿದರು.

ರಕ್ಷಣಾ ಸಚಿವಾಲಯದ ಅಧೀನದ ಬಿಇಎಂಎಲ್ ಮೈಸೂರು ಸೇರಿ ಬೆಂಗಳೂರು, ಕೆಜಿಎಫ್, ಪಾಲಕ್ಕಾಡ್ ನಲ್ಲಿ ಉತ್ಪಾದನಾ ಘಟಕ ಹೊಂದಿದೆ. 4 ಪ್ರಾದೇಶಿಕ, 20 ಸೇವಾ ಕಚೇರಿ ಹೊಂದಿರುವ ಬೃಹತ್ ಸಂಸ್ಥೆಯಾಗಿದ್ದು, ಇಲ್ಲಿ ರೈಲು, ಮೆಟ್ರೋ ರೈಲಿನ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ. ರಕ್ಷಣಾ ಇಲಾಖೆಗೆ ಬೇಕಾದ ಟೆಟ್ರಾ ಟ್ರಕ್ಕುಗಳು, ಸರ್ವೋತ್ತರ ಬ್ರಿಡ್ಜ್, ಮಿಸೈಲ್, ಮಿಸೈಲ್ ಲಾಂಚರ್, ಬುಲ್ಡೋಜರ್, ಯುದ್ಧಕ್ಕೆ ಸಂಬಂಧಿಸಿದ ವಾಹನಗಳನ್ನು ಸರಬರಾಜು ಮಾಡುವ ದೇಶದ ಏಕೈಕ ಸಂಸ್ಥೆಯಾಗಿದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಯಂತ್ರಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ. ಇದು ಏಷ್ಯಾದಲ್ಲೇ ಅತಿ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. ವಾರ್ಷಿಕವಾಗಿ ಸುಮಾರು 3,500 ಕೋಟಿ ರೂ.ಗಿಂತಲೂ ಮಿಗಿಲಾದ ವಹಿವಾಟು ಇಲ್ಲಿ ನಡೆಯುತ್ತಿದೆ ಅಲ್ಲದೇ 1964ರಿಂದಲೂ ಇದೂ ಲಾಭದಲ್ಲಿಯೇ ಸಾಗುತ್ತಾ ಬಂದಿದೆ ಆದರೂ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶೇಷಾದ್ರಿ, ರವಿ, ಮಹೇಶ್, ಸೋಮಶೇಖರ್, ಅನಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News