ಧಾರಾಕಾರ ಮಳೆಗೆ ಶಿವಮೊಗ್ಗದ ಹಲವೆಡೆ ಮನೆ ಕುಸಿತ: ಬಾಲಕನಿಗೆ ಗಾಯ, ರಸ್ತೆ - ಮನೆಗಳು ಜಲಾವೃತ

Update: 2019-10-21 17:43 GMT

ಶಿವಮೊಗ್ಗ, ಅ. 21: ಶಿವಮೊಗ್ಗ ನಗರ, ತಾಲೂಕು ವ್ಯಾಪ್ತಿಯಲ್ಲಿ ವರ್ಷಧಾರೆಯ ಅಬ್ಬರ ಮುಂದುವರಿದಿದೆ. ಭಾನುವಾರ ರಾತ್ರಿ ಬಿದ್ದ ಭಾರೀ ಮಳೆಗೆ, ಕೆಲ ಬಡಾವಣೆಗಳಲ್ಲಿ ಮನೆ ಹಾಗೂ ರಸ್ತೆಗಳು ಜಲಾವೃತವಾಗಿದ್ದವು. ಹಲವೆಡೆ ಮನೆಗಳು ಕುಸಿದು ಬಿದ್ದಿವೆ. ಓರ್ವ ಬಾಲಕನಿಗೆ ಗಾಯವಾಗಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. 

ವಿದ್ಯಾನಗರ ಬಡಾವಣೆಯಲ್ಲಿ ಚಂದ್ರಮ್ಮ ಎಂಬುವರ ಮನೆ, ಸಿದ್ದೇಶ್ವರ ನಗರದಲ್ಲಿ ತಿಪ್ಪಣ್ಣ ಹಾಗೂ ನಾಗರಾಜ್ ಎಂಬುವರ ಮನೆಗಳು ಕುಸಿದುಬಿದ್ದಿವೆ. ಹಾಗೆಯೇ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಉಮಾಬಾಯಿ, ರಾಜಲಿಬಾಯಿ ಹಾಗೂ ನಾಗರಾಜ ಎಂಬುವರ ಮನೆಗಳು ಕುಸಿದಿವೆ.  

ಇದರಲ್ಲಿ ರಾಜಲಿಬಾಯಿ ಎಂಬುವರ ಮೊಮ್ಮಗ ಯತೀಶ್ (8) ತಲೆಗೆ ಮನೆಯ ಮೇಲ್ಛಾವಣಿಯ ಹೆಂಚಿನ ಚೂರು ಬಿದ್ದು ಗಾಯವಾಗಿದೆ. ಕೂದಲೆಳೆ ಅಂತರದಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಬಾಲಕ ಆರೋಗ್ಯವಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಸೋಮವಾರ ಬೆಳಗ್ಗೆ ಗೆಜ್ಜೇನಹಳ್ಳಿಗೆ ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ದೂದ್ಯನಾಯ್ಕ್, ಸದಸ್ಯ ಟೀಕ್ಯಾನಾಯ್ಕ್ ರವರು ಭೇಟಿಯಿತ್ತು ಪರಿಶೀಲಿಸಿದರು. ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. 

ಜಲಾವೃತ: ಶಿವಮೊಗ್ಗ ನಗರದ ಮಂಡ್ಲಿ ಬಡಾವಣೆಯಲ್ಲಿ ತುಂಗಾ ಚಾನಲ್ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿತ್ತು. ಇದರಿಂದ ಬಡಾವಣೆಯ ರಸ್ತೆ, ಮನೆಗಳು ಜಲಾವೃತವಾಗಿದ್ದವು. ಮಹಾನಗರ ಪಾಲಿಕೆ ಆಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಕಾರಣದಿಂದ ಮನೆಗಳು ಜಲಾವೃತವಾಗುವಂತಾಗಿದೆ ಎಂದು ಆರೋಪಿಸಿ, ನಿವಾಸಿಗಳು ಧರಣಿ ನಡೆಸಿದರು. 

ಓ.ಟಿ. ರಸ್ತೆಯ ಮೇಲೆಯೂ ನೀರು ಹರಿಯುತ್ತಿದ್ದ ಕಾರಣದಿಂದ, ಜನ-ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಉಳಿದಂತೆ ಅಂಬೇಡ್ಕರ್ ನಗರದಲ್ಲಿಯೂ ಹಲವು ಮನೆಗಳು ಜಲಾವೃತವಾಗಿದ್ದವು. ಬಸವನಗಂಗೂರು ಕೆರೆ ಉಕ್ಕಿ ಹರಿಯುತ್ತಿರುವ ಕಾರಣದಿಂದ, ಹೊರವಲಯ ಸೋಮಿನಕೊಪ್ಪ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯಲ್ಲಿ ಜಲಾವೃತ ಸ್ಥಿತಿ ಮುಂದುವರಿದಿದೆ. 

ತುಂಬಿದ ಭದ್ರೆ: ಭದ್ರಾ ಜಲಾಶಯದಿಂದ ನೀರು ಹೊರಬಿಟ್ಟ ಕಾರಣದಿಂದ ಭದ್ರಾವತಿ ಪಟ್ಟಣದಲ್ಲಿ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನದಿಪಾತ್ರದ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿತ್ತು. ಆದರೆ ಮಳೆ ಬಿಡುವು ಕೊಟ್ಟಿದ್ದರಿಂದ, ನದಿಯಲ್ಲಿ ನೀರಿನ ಹರಿವು ಕ್ರಮೇಣ ಕಡಿಮೆಯಾಗುತ್ತಿದೆ. 
ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದ ತುಂಗಾ, ಲಿಂಗನಮಕ್ಕಿ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಜಿಲ್ಲೆಯ ವಿವಿಧೆಡೆ ಬೀಳುತ್ತಿರುವ ಭಾರೀ ಮಳೆಯಿಂದ, ನಾನಾ ರೀತಿಯ ಅವಾಂತರಗಳು ಉಂಟಾಗಿದೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹಿಂದೂ ರುದ್ರಭೂಮಿಗೆ ಸಂಪರ್ಕ ಕಲ್ಪಿಸುವ ಮರದ ಸೇತುವೆ ಕುಸಿದು ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News