ಗೂಂಡಾ ಸಂಸದ ಪ್ರತಾಪ್ ಸಿಂಹನನ್ನು ಗಡಿಪಾರು ಮಾಡಿ: ಚೋರನಹಳ್ಳಿ ಶಿವಣ್ಣ

Update: 2019-10-22 17:36 GMT

ಮೈಸೂರು,ಅ.22: ಮಹಿಷಾ ದಸರಾ ಆಚರಣೆಗೆ ಅಡ್ಡಿ ಪಡಿಸಿ ಮೂಲನಿವಾಸಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಗೂಂಡಾ ಸಂಸದ ಪ್ರತಾಪ್ ಸಿಂಹನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಸಹ ಸಂಚಾಲಕ ಚೋರನಹಳ್ಳಿ ಶಿವಣ್ಣ ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಒಬ್ಬ ಗೂಂಡಾ. ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳಿದೆ. ಮಹಿಷ ದಸರಾ ಆಚರಣೆಗೆ ಅಡ್ಡಿ ಪಡಿಸಿ ಸಂವಿಧಾನ ವಿರೋಧಿಯಾಗಿದ್ದಾನೆ. ಹಾಗಾಗಿ ಈತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಗಡಿಪಾರು ಮಾಡಬೇಕು ಎಂದು ಹೇಳಿದರು.

ಬಹುಭಾಷ ಬಹು ಸಂಸ್ಕೃತಿ ಹೊಂದಿರುವ ದೇಶದಲ್ಲಿ ಆಡಳಿತ ನಡೆಸುವ ಆಯಾ ಧರ್ಮದವರ ಸಂಸ್ಕೃತಿ, ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದ್ದರೂ ಗೂಂಡಾ ಸಂಸದ ಪ್ರತಾಪ್ ಸಿಂಹ ದುರಾಡಳಿತದಿಂದ ಜಿಲ್ಲಾಡಳಿತ ಅವಕಾಶ ನೀಡದೆ ಮೂಲನಿವಾಸಿಗಳ ಭಾವನೆಗೆ ಚ್ಯುತಿ ತಂದಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಮೊದಲು ಅನುಮತಿ ನೀಡಿ, ಶಾಮಿಯಾನ ಹಾಕಿದ್ದರೂ ಸಂಸದ ಪ್ರತಾಪ್ ಸಿಂಹನ ಒತ್ತಡಕ್ಕೆ ಹೆದರಿ ತೆರವುಗೊಳಿಸಿದ ದಲಿತರ ಭಾವನೆಗೆ ಧಕ್ಕೆ ತಂದಿದ್ದಾರೆ. ಇದು ಜಿಲ್ಲಾಡಳಿತ ವೈಫಲ್ಯವಾಗಿದ್ದು, ಜಿಲ್ಲಾದಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರ ಮೇಲೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ನಂತರ ಮನುವಾದಿಗಳು ಮತ್ತು ಬ್ರಾಹ್ಮಣರ ಆಡಳಿತವನ್ನು ಗಟ್ಟಿಗೊಳಿಸಲು ಮೂಲನಿವಾಸಿಗಳ ಆಚರಣೆಗೆ ಅಡ್ಡಿಪಡಿಸಲಾಗಿದೆ. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ, ನಮ್ಮ ಭಾವನೆಗಳಿಗೆ ಧಕ್ಕೆ ತಂದಿರುವವರ ವಿರುದ್ಧ ನಿರಂತರ ಹೋರಾಟ ನಡೆಯುತ್ತದೆ.
-ಡಾ.ವಿ.ಎಲ್.ಲಕ್ಷ್ಮಿನಾರಾಯಣ್, ಪ್ರಗತಿಪರ ಚಿಂತಕ.

ಸಂವಿಧಾನದಲ್ಲಿ ನಮಗೆ ಬೇಕಾದ ಆಚರಣೆಯನ್ನು ಶಾಂತಿಯುತವಾಗಿ ಮಾಡಿಕೊಳ್ಳುವ ಅವಕಾಶವಿದೆ. ಕೋಮು ಸಂಘರ್ಷವನ್ನು ಬಿತ್ತಲು ಮನುವಾದಿಗಳು ಮೂಲನಿವಾಸಿಗಳನ್ನು ಕೆಣಕಿದ್ದಾರೆ. ಇವರ ಆಟಕ್ಕೆ ತೆರೆ ಎಳೆಯಬೇಕು.
-ಕೆ.ಬಸವರಾಜು, ಸಿಪಿಐಎಂ ಸಂಚಾಲಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News