ಹನೂರು ತಾಲೂಕಿನಲ್ಲಿ ಭಾರೀ ಮಳೆ: ರಸ್ತೆ ಕುಸಿತ, ವಾಹನ ಸವಾರರ ಪರದಾಟ

Update: 2019-10-22 18:10 GMT

ಹನೂರು, ಅ.22: ತಾಲೂಕಿನ ಮಲೈಮಹದೇಶ್ವರ ಬೆಟ್ಟದಿಂದ ನೆರೆಯ ರಾಜ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪಾಲಾರ್ ರಸ್ತೆಯಲ್ಲಿ ಸೋಮವಾರ ಸಂಜೆ ಸುರಿದ ಧಾರಕಾರದ ಮಳೆಗೆ ಬೃಹತ್ ಆಕಾರದ ಬಂಡೆ ಕಲ್ಲುಗಳು ರಸ್ತೆಗೆ ಉರುಳಿದ ಪರಿಣಾಮ ರಸ್ತೆ ಬದಿಯ ಗುಡ್ಡ ಕುಸಿದಿದೆ.

ಹನೂರು ತಾಲೂಕಿನ ವಿವಿಧೆಡೆ ಮಳೆ ಎಡೆಬಿಡದೆ ಸುರಿಯುತ್ತಿದೆ. ಹೀಗಾಗಿ ಪಾಲರ್ ಸಮೀಪದ ಇಂಡಿಬಸಪ್ಪನ ದೇವಸ್ಥಾನದ ಬಳಿ ಹರಿದ ಮಳೆಯ ನೀರಿನ ಜೊತೆಗೆ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಸಹ ಮುಖ್ಯ ರಸ್ತೆಗೆ ಬಂದು ಬಿದ್ದಿದೆ. ಪರಿಣಾಮ ರಸ್ತೆ ಕುಸಿದಿದ್ದು, ಜನರು ಆತಂಕದಲ್ಲಿದ್ದಾರೆ. ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದ ಭಕ್ತರು ಮತ್ತು ಸಾರ್ವಜನಿಕರು ಸಂಚರಿಸಲು ಪರದಾಡುವಂತಾಯಿತು.

ಗುಡ್ಡ ಕುಸಿದ ಸುದ್ದಿ ತಿಳಿಯುತ್ತಿದ್ದಂತೆ ಮ.ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರಮೂರ್ತಿ ಮತ್ತು ಆರೋಗ್ಯಾಧಿಕಾರಿ ಶ್ರೀಕಾಂತ್, ಮ.ಬೆಟ್ಟ ಇನ್ಸ್ ಪೆಕ್ಟರ್ ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರದಿಂದ ಮಣ್ಣನ್ನು ತೆಗೆದು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.  ಬಳಿಕ ಸಂಚಾರ ಅಸ್ತವ್ಯಸ್ಥಗೊಂಡ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಇದ್ದ ಪ್ರಯಾಣಿಕರಿಗೆ ಮ.ಬೆಟ್ಟ ಪ್ರಾದಿಕಾರದ ವತಿಯಿಂದ 200 ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಿ, ಯಾವುದೇ ಅನಾಹುತವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News