ಮತ್ತೆ ಜಲಾಘಾತ, ತತ್ತರಿಸಿದ ಕರ್ನಾಟಕ

Update: 2019-10-23 04:56 GMT

ಎರಡು ತಿಂಗಳ ಹಿಂದೆ ಹಿಂದೆಂದೂ ಕಂಡರಿಯದ ಭೀಕರ ಪ್ರವಾಹದಿಂದ ನಲುಗಿ ಹೋಗಿದ್ದ ಉತ್ತರ ಕರ್ನಾಟಕ, ಮತ್ತೆ ಅಪ್ಪಳಿಸಿದ ನೆರೆ ಹಾವಳಿಯಿಂದಾಗಿ ತತ್ತರಿಸಿ ಹೋಗಿದೆ. ಇನ್ನೊಂದೆಡೆ ದಾವಣಗೆರೆ, ಹಾವೇರಿ, ಗದಗ, ಶಿವಮೊಗ್ಗ, ಬಾಗಲಕೋಟೆ, ಕೊಡಗು, ಚಿಕ್ಕ ಮಗಳೂರು, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಒಟ್ಟಾರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಹತ್ತು ಜಿಲ್ಲೆಗಳು ಮತ್ತೆ ಜಲಾಘಾತದಿಂದ ದಿಕ್ಕೆಟ್ಟು ನಿಂತಿವೆ. ಈ ಜಲಾಘಾತಕ್ಕೆ ಈ ವರೆಗೆ ಎಂಟು ಮಂದಿ ಬಲಿಯಾಗಿದ್ದಾರೆ. ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

 ಒಂದೇ ಋತುವಿನಲ್ಲಿ ಎರಡನೇ ಬಾರಿ ಈ ಭಾಗದ ಜನ ಜಲ ಪ್ರಳಯದ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿದ್ದಾರೆ. ಕಳೆದ ಬಾರಿ ಪ್ರವಾಹ ಬಂದಾಗ ಮನೆ ಮಾರು ಕಳೆದುಕೊಂಡು ಗಂಜಿ ಕೇಂದ್ರಗಳಲ್ಲಿ ಆಸರೆ ಪಡೆದವರಿಗೆ ಇದುವರೆಗೂ ಪುನರ್ವಸತಿ ಕಲ್ಪಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಈಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ರಾಜ್ಯದಲ್ಲಿ ಸರಕಾರ ಇದ್ದೂ ಇಲ್ಲದಂತಿದೆ. ಅಧಿಕಾರದಲ್ಲಿರುವವರಲ್ಲಿ ಹೊಂದಾಣಿಕೆಯಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಬೇಕೆಂದು ಮಸಲತ್ತು ನಡೆಸುತ್ತಿರುವ ಗುಂಪಿಗೆ ನಾಗಪುರ ಮೂಲದ ಸಂವಿಧಾನೇತರ ಅಧಿಕಾರ ಕೇಂದ್ರದ ಆಶೀರ್ವಾದವಿದೆ. ಇದರ ಪರಿಣಾಮ ನೆರೆ ಪರಿಹಾರ ಕಾರ್ಯಗಳ ಮೇಲೂ ಆಗಿದೆ. ಕಳೆದ ಬಾರಿ ಪ್ರವಾಹ ಬಂದಾಗ ಸಂಪುಟ ರಚಿಸಲು ವರಿಷ್ಠರು ಅವಕಾಶ ನೀಡಲಿಲ್ಲ ಎಂದು ಮುಖ್ಯಮಂತ್ರಿ ಒಬ್ಬರೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡಿದರು.

ಕೇಂದ್ರಕ್ಕೆ 38 ಸಾವಿರ ಕೋಟಿ ರೂಪಾಯಿ ನೆರವಿಗೆ ಮನವಿ ಮಾಡಿದರು. ಆದರೆ ಕರ್ನಾಟಕದ ಮುಖ್ಯಮಂತ್ರಿಯ ಮನವಿಗೆ ಕೇಂದ್ರದ ಮೋದಿ ಸರಕಾರ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಹೋದ ನಂತರವೂ ಕೇಂದ್ರದ ಹೃದಯ ಕರಗಲಿಲ್ಲ. ಪ್ರಧಾನಿ ಬಳಿ ಸರ್ವಪಕ್ಷ ನಾಯಕರ ನಿಯೋಗ ಕೊಂಡೊಯ್ಯಲು ಪ್ರತಿ ಪಕ್ಷ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ಪ್ರಧಾನಿ ಮೋದಿ ಬಳಿ ನಿಯೋಗ ಕೊಂಡೊಯ್ಯುವ ಧೈರ್ಯ ಮುಖ್ಯಮಂತ್ರಿಗಾಗಲಿ, ರಾಜ್ಯದ ಬಿಜೆಪಿ ನಾಯಕರಿಗಾಗಲಿ ಇರಲಿಲ್ಲ. ಹೀಗಾಗಿ ಕರ್ನಾಟಕ ಸರಕಾರದ ಬೇಡಿಕೆಗೆ ಕೇಂದ್ರ ಸರಕಾರ ಸೊಪ್ಪುಹಾಕಲಿಲ್ಲ. ಕೊನೆಗೆ ಸಾಕಷ್ಟು ಸತಾಯಿಸಿ 1,200 ಕೋಟಿ ರೂ. ಬಿಡುಗಡೆ ಮಾಡಿತು. ಆ ಹಣ ಯಾವುದಕ್ಕೂ ಸಾಲುವುದಿಲ್ಲ. ವಾಸ್ತವ ಸಂಗತಿ ಹೀಗಿರುವಾಗ ಮತ್ತೆ ಪ್ರವಾಹ ಅಪ್ಪಳಿಸಿದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದಿಂದ ರಾಜ್ಯದ ಬಹುತೇಕ ಕಡೆ ವಿಪರೀತ ಮಳೆ ಸುರಿಯುತ್ತಿದೆ. ಮುಂದಿನ ಐದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಜೊತೆಗೆ ಹಾವೇರಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರುಗಳಲ್ಲಿ ಹಿಂಗಾರು ಮಳೆ ನಿರೀಕ್ಷೆ ಮೀರಿ ಭರ್ಜರಿಯಾಗಿ ಸುರಿಯುತ್ತಿದೆ. ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ 115ರಿಂದ 205 ಮಿ .ಮೀ. ವರೆಗೆ ಮಳೆ ಸುರಿಯಲಿದೆಯೆಂದು ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಕರಾವಳಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ

ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರಕಾರ ತಕ್ಷಣ ನೆರವಿಗೆ ಬರಬೇಕು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೀವ್ರ ಪರಿಹಾರ ಕಾರ್ಯಾಚರಣೆ ನಡೆಯಬೇಕು. ರಾಜ್ಯದ ಬಿಜೆಪಿ ಸರಕಾರಕ್ಕೆ ಹಾಗೂ ಬಿಜೆಪಿ ಸಂಸದರಿಗೆ ಸಂತ್ರಸ್ತರ ಬಗ್ಗೆ ಕಾಳಜಿ ಇದ್ದಲ್ಲಿ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ದಾರುಣ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಮತ್ತೆ ಮನವರಿಕೆ ಮಾಡಲಿ. ಇದೇ ಪ್ರವಾಹ ಹಾಗೂ ನಷ್ಟ ಗುಜರಾತಿನಲ್ಲಿ, ಉತ್ತರ ಭಾರತದ ರಾಜ್ಯಗಳಲ್ಲಿ ಸಂಭವಿಸಿದ್ದರೆ ಕೇಂದ್ರದ ಮೋದಿ ಸರಕಾರ ಇಷ್ಟು ಉದಾಸೀನ ಧೋರಣೆ ತಾಳುತ್ತಿತ್ತೇ?

ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ನು ಕೇಂದ್ರದ ನೆರವಿಗಾಗಿ ಅಂಗಲಾಚುವ ಬದಲು ಹಕ್ಕಿನಿಂದ ಕೇಳಲಿ. ಇದಕ್ಕಾಗಿ ಸರ್ವ ಪಕ್ಷಗಳ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಲಿ. ನೆರವು ನೀಡದೇ ಸತಾಯಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಪ್ರತಿಪಕ್ಷಗಳೂ ಕೂಡ ಪ್ರತಿಭಟನೆ, ಚಳವಳಿ ನಡೆಸದೆ ಮೌನ ತಾಳಿದ್ದು ಸರಿಯಲ್ಲ. ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಧ್ವನಿಯೆತ್ತಬೇಕು.

ಕರ್ನಾಟಕ ಸೇರಿದಂತೆ ದಕ್ಷಿಣದ ನಾಲ್ಕು ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳು ದೇಶದ ಖಜಾನೆಗೆ ಶೇಕಡಾ 50ಕ್ಕಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುತ್ತವೆ. ಹೀಗಿರುವಾಗ ಕೇಂದ್ರ ಸರಕಾರ ನೀಡುವ ನೆರೆ ಪರಿಹಾರ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು, ನಮ್ಮ ಪಾಲಿನ ಹಣ ಪಡೆಯಲು ಅಂಗಲಾಚಬೇಕಾಗಿಲ್ಲ. ಯಾರಿಗೂ ಬೆಣ್ಣೆ ಹಚ್ಚಬೇಕಾಗಿಲ್ಲ. ಕೇಂದ್ರ ಸರಕಾರ ಇನ್ನಾದರೂ ಇದನ್ನು ಅರ್ಥಮಾಡಿಕೊಂಡು ಮನುಷ್ಯತ್ವದಿಂದ ವರ್ತಿಸಲಿ. ಕರ್ನಾಟಕ ಸರಕಾರ ಕೇಳಿದ 38 ಸಾವಿರ ಕೋಟಿ ರೂ. ನೆರವನ್ನು ತಕ್ಷಣ ಬಿಡುಗಡೆ ಮಾಡಲಿ, ಇಂತಹ ಸಂದರ್ಭದಲ್ಲಿ ಸ್ಪಷ್ಟನೆ ಕೇಳುವ ಕ್ರೌರ್ಯ ಸರಿಯಲ್ಲ.

ಕಳೆದ ತಿಂಗಳು ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಈಶ್ವರಪ್ಪಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಿನ ಪರಿಹಾರಕ್ಕೆ ಜನರು ಒತ್ತಾಯಿಸಿದಾಗ ‘‘ನಿಮಗೆ ಹತ್ತು ಸಾವಿರ ಕೊಟ್ಟಿದ್ದೇ ದೊಡ್ಡದು’’ಎಂದು ಉಡಾಫೆೆಯಿಂದ ಮಾತಾಡಿದ್ದರು. ಈ ಬಾರಿ ಮತ್ತೆ ಅಂತಹ ಘಟನೆ ಪುನರಾವರ್ತನೆ ಆಗಬಾರದು. ಕರ್ನಾಟಕದ ಬಿಜೆಪಿ ಸಚಿವರು, ಸಂಸದರು ಇಂತಹ ಕಷ್ಟ ಕಾಲದಲ್ಲಿ ಸಂತ್ರಸ್ತ ಜನರ ಜೊತೆ ಇರಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೊಂದ ಜನರ ಜೊತೆ ಬಿಜೆಪಿ ಮಂತ್ರಿಗಳು ಸೌಜನ್ಯದಿಂದ ವರ್ತಿಸಿ, ಅವರ ಪುನರ್ವಸತಿಗಾಗಿ ಪ್ರಯತ್ನಿಸಬೇಕು. ಕೇಂದ್ರ ಸರಕಾರ ಕೂಡಾ ತಕ್ಷಣ ನೆರವಿಗೆ ಧಾವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News