ಹಾಂಕಾಂಗ್: ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಿತ ಗಡಿಪಾರು ಕಾಯ್ದೆ ವಾಪಸ್

Update: 2019-10-23 08:51 GMT

ಹಾಂಕಾಂಗ್: ದೇಶದಲ್ಲಿ ತಿಂಗಳುಗಳ ಕಾಲ ಭಾರೀ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದ ವಿವಾದಿತ ಗಡಿಪಾರು ಮಸೂದೆಯನ್ನು ಹಾಂಕಾಂಗ್ ಶಾಸಕಾಂಗ ಅಧಿಕೃತವಾಗಿ ವಾಪಸ್ ಪಡೆದಿದೆ. ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಚೀನಾಗೆ ಗಡೀಪಾರುಗೊಳಿಸಲು ಅನುವು ಮಾಡಿಕೊಡುವ ಈ ಮಸೂದೆ ಎಪ್ರಿಲ್ ತಿಂಗಳಲ್ಲಿ ಮಂಡನೆಯಾದ ನಂತರ ದೇಶಾದ್ಯಂತ ಹೋರಾಟ ನಡೆದು ಸಾವಿರಾರು ಮಂದಿ ಬೀದಿಗಿಳಿದಿದ್ದರು. 

ಆದರೆ ಸರಕಾರದ ಕ್ರಮದಿಂದಾಗಿ ಪ್ರತಿಭಟನೆಗಳು ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ. ಮಸೂದೆಯ ವಿರುದ್ಧ ಆರಂಭಗೊಂಡ ಈ ಹೋರಾಟ ವಿಸ್ತೃತವಾಗಿ ಪ್ರಜಾಪ್ರಭುತ್ವ ಪರ ಹೋರಾಟವಾಗಿ ರೂಪುಗೊಂಡಿದೆ.

ಈ ಮಸೂದೆ ಜಾರಿಯಾಗಿ ಆರೋಪಿಗಳನ್ನು ಚೀನಾಗೆ ಕಳುಹಿಸಿದಲ್ಲಿ ಅಲ್ಲಿ  ಅವರನ್ನು ದಿಗ್ಬಂಧನಗೊಳಪಡಿಸಿ ವಿಚಾರಣೆ ಎದುರಿಸುವಂತೆ ಮಾಡಬಹುದೆಂಬ ಭಯವೂ ದೇಶದಲ್ಲಿ ವ್ಯಾಪಕವಾಗಿತ್ತು. ಈ ಮಸೂದೆಯ ವಾಪಸಾತಿಯೊಂದಿಗೆ ಸರಕಾರ ಪ್ರತಿಭಟನಾಕಾರರ ಐದು ಬೇಡಿಕೆಗಳಲ್ಲಿ ಒಂದನ್ನು ಈಡೇರಿಸಿದಂತಾಗಿದೆ.

ಪ್ರತಿಭಟನೆಗಳನ್ನು 'ಹಿಂಸಾಚಾರ' ಎಂದು ಪರಿಗಣಿಸಬಾರದು, ಬಂಧಿತ ಪ್ರತಿಭಟನಾಕಾರರಿಗೆ ಕ್ಷಮಾದಾನ ನೀಡಬೇಕು, ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ದೌರ್ಜನ್ಯಗಳ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಬೇಡಿಕೆಗಳನ್ನೂ ಪ್ರತಿಭಟನಾಕಾರರು ಈಗಾಗಲೇ ಮುಂದಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News