ಮುಂದಿನ ಬಾರಿ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ

Update: 2019-10-23 13:46 GMT

ಬಾಗಲಕೋಟೆ, ಅ. 23: ಮುಂದಿನ ಬಾರಿ ನಾನೇ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಧೈರ್ಯ ಹೇಳಿದ್ದಾರೆ.

ಬುಧವಾರ ಸ್ವಕ್ಷೇತ್ರ ಬಾದಾಮಿಯಲ್ಲಿ ಪ್ರವಾಹದಿಂದ ಮುಳುಗಡೆಯಾಗಿರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ವೇಳೆ, ‘ಜೀವನವೇ ಸಾಕಾಗಿ ಹೋಗಿದೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ. ನಮಗೆ ಶಾಶ್ವತ ಮುಕ್ತಿ ಕೊಡಿ’ ಎಂಬ ಸಂತ್ರಸ್ತರ ಅಳಲಿಗೆ ಸ್ಪಂದಿಸಿದರು.

‘2009ರಲ್ಲಿ ಪ್ರವಾಹ ಬಂದಿತ್ತು. ಆಗಲೂ ನಮ್ಮ ಊರು ಮುಳುಗಡೆಯಾಗಿತ್ತು. ಈಗ ಮತ್ತೊಮ್ಮೆ ಪ್ರವಾಹ ಉಂಟಾಗಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಇಡೀ ಊರೇ ಮುಳುಗಡೆಯಾಗಿದೆ, ಜಮೀನುಗಳು ಜಲಾವೃತಗೊಂಡಿವೆ, ಬೆಳೆಗಳು ನಾಶವಾಗಿವೆ, ರಸ್ತೆಗಳು ಕೊಚ್ಚಿ ಹೋಗಿವೆ, ತಿನ್ನಲೂ ಅನ್ನವಿಲ್ಲದ ಪರಿಸ್ಥಿತಿ ಬಂದಿದೆ’ ಎಂದು ಸಂತ್ರಸ್ತರು ಮನವಿ ಮಾಡಿದರು.

ಕ್ಷೇತ್ರದ ಮುಮ್ಮರೆಡ್ಡಿಕೊಪ್ಪ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಅಲ್ಲಿಗೆ ಕಾರಿನಲ್ಲಿ ತೆರಳಲು ಸಾಧ್ಯವಾಗದೆ ಸಿದ್ದರಾಮಯ್ಯ ಅವರು ಪೊಲೀಸ್ ಜೀಪಿನಲ್ಲಿ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಇದೇ ವೇಳೆ ಸಿದ್ದರಾಮಯ್ಯ ಸಂತ್ರಸ್ತರ ಮನವಿ ಆಲಿಸಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅತಿವೃಷ್ಟಿಯಿಂದ ರಾಜ್ಯದಲ್ಲಿ ಆಗಿರುವ ಅನಾಹುತಗಳ ಬಗ್ಗೆ ವಿಧಾನಸಭೆ ಕಲಾಪದಲ್ಲಿ ನಾನು ಐದು ಗಂಟೆಗಳ ಕಾಲ ಸುಧೀರ್ಘ ಭಾಷಣ ಮಾಡಿದ್ದೆ. ಆದರೆ, ಸರಕಾರ ಒಂದು ನಿಮಿಷದಲ್ಲಿ ಉತ್ತರ ನೀಡಿ ಸುಮ್ಮನಾಗಿದೆ.

ನನ್ನ ಭಾಷಣಕ್ಕೆ ಸರಿಯಾಗಿ ಉತ್ತರವನ್ನು ಸರಕಾರ ನೀಡಲಿಲ್ಲ. ನೆರೆ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಹೀಗಾಗಿ ನಾನೇ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ನಿಮ್ಮ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಪರಿಹಾರ ಕಲ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News