ಡಿಕೆಶಿಗೆ ಜಾಮೀನು: ದಿಲ್ಲಿ ಹೈಕೋರ್ಟ್ ತೀರ್ಪು ಸ್ವಾಗತಿಸಿದ ಸಿದ್ದರಾಮಯ್ಯ, ದೇವೇಗೌಡ ಸೇರಿ ಹಲವು ಗಣ್ಯರು

Update: 2019-10-23 13:49 GMT

ಬೆಂಗಳೂರು, ಅ. 23: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕಮಾರ್ ಅವರಿಗೆ ಹೊಸದಿಲ್ಲಿ ಹೈಕೋರ್ಟ್ ಜಾಮೀನು ಮುಂಜೂರು ಮಾಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಸೇರಿ ಹಲವು ಗಣ್ಯರು ದಿಲ್ಲಿ ಹೈಕೋರ್ಟ್ ತೀರ್ಪುನ್ನು ಸ್ವಾಗತಿಸಿದ್ದಾರೆ.

ನ್ಯಾಯಕ್ಕೆ ದೊರೆತ ಜಯ: ‘ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಂತೋಷ: ‘ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವುದು ಸಂತೋಷದ ವಿಚಾರ. ಸೋಮವಾರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿ ಜಾಮೀನು ಸಿಗುವ ಆಶಯವನ್ನು ವ್ಯಕ್ತಪಡಿಸಿದ್ದೆ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

‘ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ನ್ಯಾಯಾಲಯಗಳ ಮೇಲಿನ ಜನರ ವಿಶ್ವಾಸ ಹೆಚ್ಚಿಸಿದೆ. ತನಿಖೆ ವೇಳೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ನೋಡಿದರೆ ದ್ವೇಷದ ರಾಜಕಾರಣದ ಸಂಶಯವಿದೆ. ಏನೇ ಆದರೂ ಶಿವಕುಮಾರ್ ಅವರಿಗೆ ದೀಪಾವಳಿ ಬೆಳಕಾಗಿ ಬಂದಿದೆ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಶಕ್ತಿಯಾಗಿ ಬೆಳೆಯಲಿ: ‘ಕೊನೆಗೂ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ದೊರೆತಿದ್ದು ಅವರಿಗೆ ನನ್ನ ಶುಭ ಹಾರೈಕೆ. ಕಾಂಗ್ರೆಸ್ ಶಕ್ತಿಯಾಗಿ ಗೆಳೆಯ ಶಿವಕುಮಾರ್ ಬೆಳೆಯಲಿ ಮತ್ತು ರಾಜ್ಯದ ಸಮಗ್ರ ಏಳ್ಗೆಗಾಗಿ ಶ್ರಮಿಸಲಿ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

‘ದೆಹಲಿಯ ಹೈಕೋರ್ಟ್ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿರುವ ಜಾಮೀನು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದು ನ್ಯಾಯಾಲಯದ ತೀರ್ಮಾನವನ್ನು ಸ್ವಾಗತಿಸುತ್ತೇನೆ’ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

‘ದಿಲ್ಲಿ ಹೈಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ನ್ಯಾಯ ಸಿಗಲಿದೆ. ಅವರು ಆರೋಪಗಳಿಂದ ಮುಕ್ತರಾಗುವ ವಿಶ್ವಾಸವಿದೆ. ಆದರೆ, ಬಿಜೆಪಿ ರಾಜಕೀಯ ದ್ವೇಷಕ್ಕಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಐಟಿ ಮತ್ತು ಈಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಶೀಘ್ರವೇ ಬಹಿರಂಗಗೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಕಳೆದ ಐವತ್ತು ದಿನಗಳು ಮಾನಸಿಕ ಹಿಂಸೆ ಅನುಭವಿಸಿದ್ದೆವು. ಹೊಸದಿಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ಸಂತೋಷ ತಂದಿದೆ. ಜಾರಿ ನಿರ್ದೇಶನಾಲಯ(ಈಡಿ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಅಲ್ಲಿಯೂ ನಾವು ಕಾನೂನು ಹೋರಾಟ ಮುಂದುವರಿಸಲಿದ್ದೇವೆ’

-ಡಿ.ಕೆ.ಸುರೇಶ್, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News