ಎಸೆಸೆಲ್ಸಿ ಪರೀಕ್ಷೆ ಮುಂದೂಡುವುದಿಲ್ಲ: ಸಚಿವ ಸುರೇಶ್ ಕುಮಾರ್

Update: 2019-10-23 13:52 GMT

ಬೆಳಗಾವಿ, ಅ.23: : ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ಕಾರಣಗಳನ್ನು ನೀಡಿ ಮುಂದೂಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಮೂಡಲಗಿ ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ಹಾಳಾಗಿರುವ ಸರಕಾರಿ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರವಾಹ, ಅತಿವೃಷ್ಟಿ ಉಂಟಾಗಿತ್ತು. ಹೀಗಾಗಿ, ಹಲವಾರು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿತ್ತು ಹಾಗೂ ಕೆಲವು ಕಡೆ ಶಾಲೆಗಳನ್ನು ಸಂತ್ರಸ್ತರಿಗೆ ಆಶ್ರಯ ನೀಡಲು ಬಳಸಿಕೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಬೇಕಿದೆಯಾ ಎಂದು ಶಿಕ್ಷಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಅವರೆಲ್ಲರೂ, ನಾವು ನಿಗದಿತ ಸಮಯದೊಳಗೆ ಪಠ್ಯಗಳ ಬೋಧನೆಯನ್ನು ಮುಗಿಸುತ್ತೇವೆ. ಹೀಗಾಗಿ, ಪರೀಕ್ಷೆ ಮುಂದೂಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಆದುದರಿಂದಾಗಿ ಪರೀಕ್ಷೆಗಳು ಮುಂದೂಡುವುದಿಲ್ಲ ಎಂದರು.

ಮಳೆ ಮತ್ತು ನೆರೆಯಿಂದ ಹಾಳಾಗಿರುವ ಶಾಲೆಗಳ ದುರಸ್ತಿ ಹಾಗೂ ಕೊಠಡಿಗಳ ನಿರ್ಮಾಣಕ್ಕೆ 534 ಕೋಟಿ ಬೇಕಾಗಿದೆ. ತಕ್ಷಣದ ದುರಸ್ತಿಗೆ 164 ಕೋಟಿ ಬೇಕು. 500 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶಾಲೆ, ಅಂಗನವಾಡಿಗಳು ಹಾಗೂ ಆಸ್ಪತ್ರೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ನಮ್ಮ ಸರಕಾರ ಸೂಚಿಸಿದೆ ಎಂದು ತಿಳಿಸಿದರು.

ಈ ಬಾರಿ 7ನೇ ತರಗತಿಯ ಮಕ್ಕಳಿಗೆ ಪ್ರಾಯೋಗಿಕವಾಗಿ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು. ಪಬ್ಲಿಕ್ ಪರೀಕ್ಷೆ ಎಂದರೆ ಹೇಗಿರುತ್ತದೆ? ಹೇಗೆ ನಡೆಸುತ್ತಾರೆ ಎಂಬ ಅನುಭವ ಮಕ್ಕಳಿಗೆ ಆಗಲೆಂದು ನಡೆಸುತ್ತಿದ್ದೇವೆ. ಯಾವ ಮಕ್ಕಳನ್ನೂ ಫೇಲ್ ಮಾಡುವುದಿಲ್ಲ. ಅವರಿಗೆ ಆತ್ಮವಿಶ್ವಾಸ ತುಂಬುವ ಕ್ರಮವಾಗಿ ಇದನ್ನು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News