ಕಾರ್ಯಕರ್ತರ ವಿರುದ್ಧ ಹಗೆತನ ಸಹಿಸುವುದಿಲ್ಲ: ಸಿಎಂ ಬಿಎಸ್‌ವೈಗೆ ದೇವೇಗೌಡ ಎಚ್ಚರಿಕೆ

Update: 2019-10-23 16:11 GMT

ಯಾದಗಿರಿ, ಅ. 23: ‘ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎಂದಿದ್ದ ಯಡಿಯೂರಪ್ಪ, ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಹಗೆತನ ಸಾಧಿಸುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ.

ಬುಧವಾರ ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಎಂದು ದೂರಿದರು.

ಲಿಂಗಾಯತರನ್ನು ಬೆಳೆಯಲು ಬಿಡುತ್ತಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ತಾವೊಬ್ಬರೇ ಲಿಂಗಾಯತ ನಾಯಕ ಎಂದುಕೊಂಡಿದ್ದಾರೆ. ಬೇರೆ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ದೇವೇಗೌಡ ಇದೇ ವೇಳೆ ಆರೋಪಿಸಿದರು.

ಶರಣಗೌಡ ಕಂದಕೂರ ಲಿಂಗಾಯತ ನಾಯಕರಾಗಿ ಬೆಳೆಯುತ್ತಿದ್ದಾರೆ. ಅವರನ್ನು ತುಳಿಯಲು ಬಿಎಸ್‌ವೈ ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ದೇವೇಗೌಡ ಬರೀ ಗಲಾಟೆ ಮಾಡಿಸಿ ರಾಜಕೀಯಕ್ಕೆ ಬಂದಿದ್ದಾನೆಂದು ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನನ್ನ 60 ವರ್ಷದ ರಾಜಕೀಯದಲ್ಲಿ ಇಂತಹ ಪರಿಸ್ಥಿತಿ ಎಂದೂ ಕಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜಕೀಯ ದ್ವೇಷದಿಂದ ಗುರುಮಿಠಕಲ್ ಕ್ಷೇತ್ರದ ಅನುದಾನ ರದ್ದು ಮಾಡಿದ್ದಾರೆ. ಅನುದಾನಕ್ಕೆ ಆಗ್ರಹಿಸಿ ಬಿಎಸ್‌ವೈಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದರೆ ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ಜೆಡಿಎಸ್ ಕಾರ್ಯಕರ್ತ ವಿರುದ್ಧವೇ ಮೊಕದ್ದಮೆ ದಾಖಲಿಸಲಾಗಿದೆ ಎಂದು ಟೀಕಿಸಿದರು.

ಪಕ್ಷದ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಕೇಸುಗಳನ್ನು ಕೂಡಲೇ ಹಿಂಪಡೆಯಬೇಕು. ಯಾದಗಿರಿ ನಗರ ಠಾಣೆ ಪಿಎಸ್ಸೈ ಬಾಪುಗೌಡ ಅವರನ್ನು ಅಮಾನತು ಮಾಡಬೇಕು. ಕ್ಷೇತ್ರದ ಅನುದಾನ ರದ್ದು ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ದೇವೇಗೌಡ ಆಗ್ರಹಿಸಿದರು.

ಮಾಜಿ ಸಚಿವ ಬಂಡೆಪ್ಪಕಾಶೆಂಪೂರ್, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

‘ನಗರ ಪಿಎಸ್ಸೈ ಬಾಪುಗೌಡ ಅಮಾನತ್ತಿಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ದೇವೇಗೌಡ ಆಗಮಿಸಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ದೇವೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ, ಇದಕ್ಕೆ ಸೊಪ್ಪುಹಾಕದ ಅವರು ಧರಣಿಯಲ್ಲಿ ಪಾಲ್ಗೊಂಡರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News