×
Ad

ಸಾಧು ಕೋಕಿಲ ವಿರುದ್ಧ ಅತ್ಯಾಚಾರ ಆರೋಪ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-10-23 22:03 IST

ಬೆಂಗಳೂರು, ಅ.23: ನಟ ಸಾಧು ಕೋಕಿಲ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಾಧು ಕೋಕಿಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಮೈಸೂರಿನ ಮಸಾಜ್ ಪಾರ್ಲರ್‌ಗೆ ಸಾಧು ಕೋಕಿಲ ಬಂದಿರಲಿಲ್ಲ ಎಂದು ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಪೊಲೀಸರೂ ಕಾನೂನಿನ ಅಡಿಯಲ್ಲಿ ತನಿಖೆಯನ್ನು ನಡೆಸಿಲ್ಲ. ಈ ಪ್ರಕರಣವನ್ನು ಹೀಗೆಯೇ ಮುಂದುವರಿಸಿದರೆ ಸಾಧು ಕೋಕಿಲ ಅವರ ತೇಜೋವಧೆಯಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ಸಾಧು ಕೋಕಿಲ ಅವರೆ 'ನಾನು ಪಾರ್ಲರ್‌ಗೆ ಹೋಗಿಲ್ಲ. ಮಹಿಳೆಯನ್ನು ಅತ್ಯಾಚಾರ ಮಾಡಿಲ್ಲ' ಎಂದು ಹೇಳಿಕೆಯನ್ನು ನೀಡಿದ್ದಾರೆ. ಆದರೂ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಒಂದು ವಾರದೊಳಗೆ ಪ್ರಕರಣ ಸಂಬಂಧ ಉತ್ತರ ನೀಡಲು ಮೈಸೂರು ಸರಸ್ವತಿ ಠಾಣಾ ಪೊಲೀಸರಿಗೆ ಸೂಚಿಸಿತು. ಅಲ್ಲದೆ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ಏನಿದು ಪ್ರಕರಣ: ಮೈಸೂರಿನ ಮಸಾಜ್ ಪಾರ್ಲರ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2017ರ ಅ.20ರಂದು ಈ ಕುರಿತು ಸರಸ್ವತಿಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಾಧು ಕೋಕಿಲ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News