ಪ್ರವಾಹ ಬಾಧಿತ ಸರಕಾರಿ ಶಾಲೆಗಳ ದುರಸ್ತಿಗೆ 500 ಕೋಟಿ ರೂ.ಅನುದಾನ: ಸಚಿವ ಸುರೇಶ್ ಕುಮಾರ್

Update: 2019-10-23 16:35 GMT

ಬೆಳಗಾವಿ, ಅ.23: ಪ್ರವಾಹ ಬಾಧಿತಗೊಂಡಿರುವ ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ರಾಜ್ಯ ಸರಕಾರ 500 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ನೆರೆಪೀಡಿತ ಗ್ರಾಮಗಳ ಶಾಲೆಗಳಿಗೆ ಭೇಟಿ ಕಾರ್ಯಕ್ರಮವನ್ನು ಬುಧವಾರ ಬೆಳಗಾವಿ ಜಿಲ್ಲೆಯಿಂದ ಆರಂಭಿಸಿದ ಅವರು, ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳಿಗೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಡುಗಡೆಯಾಗಿರುವ ಅನುದಾನವನ್ನು ಅಂಗನವಾಡಿ ಕೇಂದ್ರ, ಶಾಲಾ ಕಟ್ಟಡ ಹಾಗೂ ಆಸ್ಪತ್ರೆಗಳ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿಗೆ ಬಳಸಿಕೊಳ್ಳಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಹತ್ತು ದಿನಗಳ ಹಿಂದೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓಗಳ ಜೊತೆಗೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಪ್ರವಾಹ ಬಾಧಿತ ಶಾಲೆಗಳ ಕುರಿತು ಚರ್ಚೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಪ್ರವಾಹದಿಂದ 1997 ಶಾಲೆಗಳ 2658 ಕೊಠಡಿಗಳು ಹಾನಿಗೊಂಡಿವೆ. ಇವುಗಳ ದುರಸ್ತಿಗೆ 65 ಕೋಟಿ ರೂ.ಅಂದಾಜು ವೆಚ್ಚವಾಗಲಿದೆ. ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರವಾಹದಿಂದಾಗಿ ಶಿಥಿಲಾವಸ್ಥೆಗೊಂಡಿರುವ ಶಾಲಾ ಕಟ್ಟಡಗಳನ್ನು ತಕ್ಷಣವೇ ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ವಶಪಡಿಸಿಕೊಳ್ಳಬೇಕು. ಅಲ್ಲದೇ. ಇಂತಹ ಕಟ್ಟಡಗಳು ಯಾವುದೇ ಸಮಯದಲ್ಲಿ ಧರಶಾಹಿಯಾಗುವ ಸಾಧ್ಯತೆಗಳಿರುವುದರಿಂದ ಈ ಕಟ್ಟಡಗಳಲ್ಲಿ ಶಾಲೆ ನಡೆಸದಂತೆ ಹಾಗೂ ಬೇರೆ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ನೆರೆ ಪೀಡಿತ ಗ್ರಾಮಗಳ ಶಾಲೆಗಳ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬಸವನಕುಡಚಿ, ಕಡಕೋಳ, ಸುನಾಳ, ರಾಮದುರ್ಗ, ಅಡಿಬಟ್ಟಿ, ಮೆಳವಂಕಿ ಗ್ರಾಮಗಳಿಗೆ ಭೇಟಿ ಮಾಡಿ ಶಾಲೆಗಳ ಪರಿಶೀಲನೆ ನಡೆಸಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದರು.

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಪರೀಕ್ಷೆ ಕುರಿತು ವಿದ್ಯಾರ್ಥಿಗಳಲ್ಲಿ ಮನೆ ಮಾಡಿರುವ ಭಯ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಏಳನೇ ತರಗತಿಯಿಂದಲೆ ಪಬ್ಲಿಕ್ ಪರೀಕ್ಷೆ ವ್ಯವಸ್ಥೆ ಜಾರಿ ತರಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಪರೀಕ್ಷಾ ಕೊಠಡಿ ಎಂಬುದು ರಣರಂಗವಲ್ಲ. ಅದು ಕ್ರೀಡಾಂಗಣ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಪರೀಕ್ಷಾ ಗಂಭೀರತೆಯ ಅರಿವನ್ನು ಮೂಡಿಸುವ ಹಿನ್ನೆಲೆಯಲ್ಲಿ ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ಪದ್ಧತಿ ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ಎನ್, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಬೆಳಗಾವಿ ಮತ್ತು ಚಿಕ್ಕೋಡಿ ಸಾ.ಶಿ.ಇ.ಉಪನಿರ್ದೇಶ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಇಒಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News