ಸರೋಜಿನಿ ಮಹಿಷಿ ವರದಿ ಸದನದಲ್ಲಿ ಮಂಡಿಸಲು ಮುಖ್ಯಮಂತ್ರಿಗೆ ಮನವಿ

Update: 2019-10-23 17:28 GMT

ಬೆಂಗಳೂರು, ಅ.23: ರಾಜ್ಯ ಸರಕಾರ ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಮೂಲಕ ಕನ್ನಡಿಗರ ಬಹುದಿನದ ಬೇಡಿಕೆಯನ್ನು ಈಡೇರಿಸಬೇಕೆಂದು ಕನ್ನಡ ನುಡಿ-ಗಡಿ ಜಾಗೃತಿ ಸಮಿತಿ ಹಾಗೂ ಕನ್ನಡ ಗೆಳೆಯರ ಬಳಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದೆ.

ಸರೋಜಿನಿ ಮಹಿಷಿ ವರದಿಯು ಕನ್ನಡಿಗರಿಗೆ ಉದ್ಯೋಗವನ್ನು ಕಲ್ಪಿಸುವ ಮಾರ್ಗವನ್ನು ಸೂಚಿಸಿದೆ. ಈ ವರದಿಯನ್ನು ಸರಕಾರ ಒಪ್ಪಿದೆ. ಆದರೆ, ಇದರ ಬಗ್ಗೆ ಸ್ಪಷ್ಟವಾದ ಕಾನೂನನ್ನು ರೂಪಿಸಿಲ್ಲ. ಆಂಧ್ರಪ್ರದೇಶದ ಸರಕಾರವು ಖಾಸಗಿ ಕಂಪೆನಿಗಳಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರಕಾರವು ಸರೋಜಿನಿ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಬೇಕು.

2008ರಲ್ಲಿ ತಮ್ಮ ಪ್ರಯತ್ನದಿಂದಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಕ್ಕಿತು. ವಿಷಾದದ ಸಂಗತಿಯೆಂದರೆ 11ವರ್ಷಗಳು ಕಳೆದ ನಂತರವೂ ಕನ್ನಡಕ್ಕೆ ಶಾಸ್ತ್ರೀಯ ಭಾಷೆಗೆ ಸಿಗಬೇಕಾದ ಸವಲತ್ತುಗಳು ದೊರೆತ್ತಿಲ್ಲ. ಮತ್ತು ಕೇಂದ್ರ ಸರಕಾರವು ನೀಡುವ ನೆರವನ್ನೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಅದನ್ನು ದೊರಕಿಸಿಕೊಡಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕವಾಗಿ ಕನ್ನಡ ಕಾಣಬೇಕಾದರೆ ನಾಮಫಲಕ, ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದ್ದ ಸರಕಾರದ ಆದೇಶವನ್ನು ಹೈಕೋರ್ಟ್ 2010ರಲ್ಲಿ ತಾಂತ್ರಿಕ ಕಾರಣಗಳನ್ನು ನೀಡಿ ರದ್ದುಪಡಿಸಿದೆ. ಹಾಗೂ ಸರಕಾರ ಕಾನೂನು ತಜ್ಞರ ಸಲಹೆ ಪಡೆದು ಎಲ್ಲ ನಾಮಫಲಕಗಳಲ್ಲಿ ಕನ್ನಡವನ್ನು ಮೊದಲ ಸಾಲಿನಲ್ಲಿ ಪ್ರದಾನವಾಗಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಹೊಸ ಕಾಯಿದೆಯನ್ನು ರೂಪಿಸಬೇಕೆಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News